ADVERTISEMENT

‘ಯುವಜನರಿಗೆ ಸಂಸ್ಕೃತಿಯ ಅರಿವು ಮೂಡಿಸಿ’

ಜಾನಪದ ಗಾಯನ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 13:15 IST
Last Updated 15 ಜುಲೈ 2019, 13:15 IST
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ನಡೆದ ಜಾನಪದ ಗಾಯನ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಬಿ.ಆರ್.ಶಿವಕುಮಾರ್ ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ನಡೆದ ಜಾನಪದ ಗಾಯನ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಬಿ.ಆರ್.ಶಿವಕುಮಾರ್ ಉದ್ಘಾಟಿಸಿದರು   

ಚನ್ನಪಟ್ಟಣ: ‘ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಗ್ರಾಮೀಣ ಸಂಸ್ಕೃತಿ ಮತ್ತು ಜಾನಪದ ನಶಿಸಿಹೋಗುತ್ತಿದ್ದು, ಇದನ್ನು ಉಳಿಸಲು ಇಂದಿನ ಯುವಜನರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ’ ಎಂದು ಕಲಾ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಶಿವಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಚಕ್ಕೆರೆ ಗ್ರಾಮದ ಚುಂಚನಗಿರಿ ದೇವಾಲಯದ ಆವರಣದಲ್ಲಿ ಹುಚ್ಚಮ್ಮ ಜಾನಪದ ಸಾಂಸ್ಕೃತಿಕ ಕಲಾ ಸಂಘ ಏರ್ಪಡಿಸಿದ್ದ ಜಾನಪದ ಗಾಯನ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಯುವಕರು ತಮ್ಮ ಜ್ಞಾನ ಸಂಪಾದನೆಯ ಜತೆಗೆ ಸೋಬಾನೆ ಪದ, ಜಾನಪದ ಗೀತೆಗಳ ಪದಗಳ ಬಗ್ಗೆ ಅರಿವು ಮೂಡಿಸಿಕೊಂಡು ನಮ್ಮ ಸಂಸ್ಕೃತಿಯನ್ನು ಉಳಿಸಲು ಮುಂದಾಗಬೇಕಾಗಿದೆ. ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕಾಗಿದೆ’ ಎಂದರು.

ADVERTISEMENT

ಗ್ರಾಮದ ಮುಖಂಡ ಮಾದೇಗೌಡ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದಾರೆ. ಇಂದಿನ ಮಕ್ಕಳಿಗೆ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆಯೂ ಅರಿವು ಮೂಡಿಸುವ ಅಗತ್ಯ ಇದೆ. ಇದರ ಜೊತೆಗೆ ಪ್ರತಿಯೊಬ್ಬರು ಪ್ರತಿನಿತ್ಯ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಯೋಗಾಭ್ಯಾಸ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು.

ಬೊಂಬೆನಾಡು ಕೂಲಿಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ ಮಾತನಾಡಿದರು. ಪುನರ್ವಸು ಯೋಗಕೇಂದ್ರದ ಮಕ್ಕಳು ಯೋಗ ಪ್ರದರ್ಶನ ಹಾಗೂ ಜಾನಪದ ಗೀತ ಗಾಯನವನ್ನು ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮದ ಮುಖಂಡರಾದ ಸಿದ್ದಪ್ಪ, ಹೋಟೆಲ್ ನಿಂಗಪ್ಪ, ಗಂಗೆದೊಡ್ಡಿ ನಿಂಗೇಗೌಡ, ಅರ್ಚಕರಾದ ಸಿದ್ದರಾಜು, ಅಮರ್, ಅಪ್ಪಾಜಿ. ಪತ್ರಕರ್ತ ಎಂ.ಎಸ್.ಸುರೇಶ್ ಕುಮಾರ್, ಗಾಯಕ ಜಯಸಿಂಹ, ಬೈರವ ಭಾಗವಹಿಸಿದ್ದರು.

ಗಾಯಕರಾದ ಹೊನ್ನಿಗನಹಳ್ಳಿ ಸಿದ್ದರಾಜು, ಎಂ.ಬಿ.ಮಹದೇವ್, ಎಸ್.ಬಿ.ಗಂಗಾಧರ್, ಬಾಣಂತಹಳ್ಳಿ ಪ್ರಕಾಶ್, ತಸ್ಮಿಯಾ ಗೀತಗಾಯನವನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.