ADVERTISEMENT

ಬ್ಯಾಂಕ್‌ ಮುಂದೆ ಸಾಲುಗಟ್ಟಿದ ಗ್ರಾಹಕರು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 3:39 IST
Last Updated 28 ಏಪ್ರಿಲ್ 2021, 3:39 IST
ಕನಕಪುರದ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಶಾಖೆ ಮುಂಭಾಗ ಜನರು ಗುಂಪು ಸೇರಿರುವುದು
ಕನಕಪುರದ ಸ್ಟೇಟ್‌ ಬ್ಯಾಂಕ್‌ ಇಂಡಿಯಾ ಶಾಖೆ ಮುಂಭಾಗ ಜನರು ಗುಂಪು ಸೇರಿರುವುದು   

ಕನಕಪುರ:ಇಲ್ಲಿನ ಪೋಸ್ಟ್‌ ಆಫೀಸ್‌ ಪಕ್ಕದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಭಾಗ ಮಂಗಳವಾರ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಸೇರಿದ್ದ ಜನರನ್ನು ಪೊಲೀಸರು ಸಾಮಾಜಿಕ ಅಂತರದಲ್ಲಿ ನಿಲ್ಲಿಸಿ, ಬ್ಯಾಂಕ್‌ ಮ್ಯಾನೇಜರ್‌ಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.

ಸರ್ಕಾರ ಸೋಂಕು ತಡೆಗಟ್ಟಲು ಲಾಕ್‌ಡೌನ್‌ನಂತಹ ಕಠಿಣ ಕ್ರಮ ಕೈಗೊಂಡಿದೆ. ಆದರೆ, ಬ್ಯಾಂಕಿನಲ್ಲಿ ವ್ಯವಹರಿಸಲು ಬಂದಿದ್ದ ನೂರಾರು ಗ್ರಾಹಕರು ಒಮ್ಮಲೆ ಸಿನಿಮಾ ಥಿಯೇಟರ್‌ನಲ್ಲಿ ಟಿಕೆಟ್‌ ಖರೀದಿಸುವಂತೆ ಗುಂಪಾಗಿ ಬ್ಯಾಂಕಿನ ಮುಂದೆ ಜಮಾಯಿಸಿದ್ದರು.

ಜನರು ಗುಂಪು ಸೇರಿರುವುದನ್ನು ನೋಡಿದ ಬ್ಯಾಂಕಿನ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರೇ ಕೊರೊನಾ ನಿಯಮ ಉಲ್ಲಂಘನೆ ಮಾಡಿ ಸೋಂಕು ಹರಡಲು ಕಾರಣವಾಗುತ್ತಿದೆ ಎಂದು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದರು.

ADVERTISEMENT

ಸ್ಥಳಕ್ಕೆ ಬಂದ ಸಬ್‌ ಇನ್‌ಸ್ಪೆಕ್ಟರ್‌ ಲಕ್ಷ್ಮಣ್‌ಗೌಡ ಬ್ಯಾಂಕಿಗೆ ಬಂದಿರುವ ಗ್ರಾಹಕರಿಗೆ ಅಂತರ ಕಾಯ್ದುಕೊಂಡು ನಿಂತು ವ್ಯವಹರಿಸಬೇಕು. ಇಲ್ಲವಾದಲ್ಲಿ ಬ್ಯಾಂಕಿನ ಬಾಗಿಲು ಬಂದ್‌ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು. ಕೋವಿಡ್‌ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಏಕೆ ಸುಮ್ಮನಿದ್ದೀರಿ ಎಂದು ಮ್ಯಾನೇಜರ್‌ಗೆ ತರಾಟೆ ತೆಗೆದುಕೊಂಡರು.

‘ಬ್ಯಾಂಕ್‌ನಲ್ಲಿ ವ್ಯವಹರಿಸಬೇಕಾದರೆ ಗ್ರಾಹಕರು ಮೂರು ಅಡಿ ಅಂತರದಲ್ಲಿ ನಿಂತುಕೊಳ್ಳುವಂತೆ ಬಾಕ್ಸ್‌ ಮಾರ್ಕ್‌ ಮಾಡಬೇಕು. ಬ್ಯಾಂಕಿನ ಸೆಕ್ಯೂರಿಟಿಗಳು ಜನರು ಗುಂಪು ಸೇರಿದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.