ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ‘ಸಾಮಾಜಿಕ ಜೀವನದ ಮೇಲೆ ಸೈಬರ್ ಅಪರಾಧಗಳ ಪರಿಣಾಮ ಮತ್ತು ಮುನ್ನೆಚ್ಚರಿಕೆ’ ವಿಷಯ ಕುರಿತ ಕಾನೂನು ಕಾರ್ಯಗಾರವನ್ನು ಹೈಕೋರ್ಟ್ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಉದ್ಘಾಟಿಸಿದರು.
ಚನ್ನಪಟ್ಟಣ: ‘ನಾವಿಂದು ತಂತ್ರಜ್ಞಾನದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಇಂಟರ್‌ನೆಟ್ ಬದುಕಿನ ಭಾಗವಾಗಿದ್ದು ಸಾಮಾಜಿಕ ಜಾಲತಾಣ, ವೆಬ್‌ಸೈಟ್‌ಗಳು ಹಾಗೂ ವಿವಿಧ ಆ್ಯಪ್‌ಗಳು ಮಾಹಿತಿಯ ದೊಡ್ಡ ಮೂಲಗಳಾಗಿವೆ. ಇದು ವಂಚನೆಗೆ ಎಡೆ ಮಾಡಿಕೊಟ್ಟಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದ್ರೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚನ್ನಪಟ್ಟಣ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾಲೇಜು ಸಹಯೋಗದಲ್ಲಿ ಶನಿವಾರ ನಡೆದ ‘ಸಾಮಾಜಿಕ ಜೀವನದ ಮೇಲೆ ಸೈಬರ್ ಅಪರಾಧಗಳ ಪರಿಣಾಮ ಮತ್ತು ಮುನ್ನೆಚ್ಚರಿಕೆ’ ವಿಷಯ ಕುರಿತು ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿದೆಸೆಯಲ್ಲಿ ಚನ್ನಾಗಿ ಓದಿ ಭವಿಷ್ಯ ಕಟ್ಟಿಕೊಳ್ಳಬೇಕಾದ ವಿದ್ಯಾರ್ಥಿಗಳು ಇಂದು ಅಂತರ್ಜಾಲದಿಂದಾಗಿ ಪುಸ್ತಕ ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ತಮಗೆ ಬೇಕಾದ ಮಾಹಿತಿಗೆ ಪುಸ್ತಕದ ಬದಲು ಅಂತರ್ಜಾಲವನ್ನೇ ಅವಲಂಬಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸದೆ ಎಲ್ಲವನ್ನೂ ಸರಿ ಎಂದು ಒಪ್ಪುವ ಮನಸ್ಥಿತಿ ಹೆಚ್ಚಾಗಿದೆ. ಹಾಗಾಗಿ, ಇಂಟರ್‌ನೆಟ್ ಬಳಕೆಗೆ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕಿದೆ’ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ, ‘ದೇಶದಲ್ಲಿ ಡಿಜಿಟಲ್ ಕ್ರಾಂತಿಯಾದ ನಂತರ, ಇಡೀ ಜಗತ್ತು ಮೊಬೈಲ್ ಮೂಲಕ ನಮ್ಮ ಅಂಗೈನಲ್ಲಿದೆ. ಅದರಿಂದ ಎಷ್ಟು ಉಪಯೋಗ ಇದೆಯೊ ಅಷ್ಟೇ ಅಪಾಯವೂ ಇದೆ. ಹಾಗಾಗಿ, ಮೊಬೈಲ್ ಅನ್ನು ಎಚ್ಚರಿಕೆಯಿಂದ ವಹಿಸಬೇಕು’ ಎಂದು ಹೇಳಿದರು.
‘ದೇಶದಲ್ಲಿ ಯುವಜನರೇ ಬಹುಸಂಖ್ಯಾತರಾಗಿದ್ದು, ಹೆಚ್ಚಿನವರ ಬಳಿ ಸ್ಮಾರ್ಟ್ ಫೋನ್‌ಗಳಿವೆ. ವಂಚಕರು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ಇದರಿಂದಾಗಿ ಹಣದ ಜೊತೆಗೆ ಮಾನಸಿಕ ನೆಮ್ಮದಿಯೂ ಮಾಯವಾಗುತ್ತಿದೆ. ಬ್ಲ್ಯಾಕ್‌ಮೇಲ್, ವಂಚನೆಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಮಾತನಾಡಿ, ‘ಅಪರಿಚಿತರಿಂದ ಬೆದರಿಕೆ ಕರೆಗಳು ಬಂದಾಗ ಜನರು ಆತಂಕಕ್ಕೆ ಒಳಗಾಗದೆ ಮಾತನಾಡಬೇಕು. ಅವರು ಹೇಳುವ ಮಾಹಿತಿಯನ್ನು ಪರಾಮರ್ಶಿಸಬೇಕು. ಬಲವಂತವಾಗಿ ಅಥವಾ ಒತ್ತಡದಲ್ಲಿ ಹಣವನ್ನು ವರ್ಗಾಯಿಸಬಾರದು. ಕೂಡಲೇ ತಮ್ಮ ಕುಟುಂಬದವರು ಅಥವಾ ಆತ್ಮೀಯರ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.
‘ಯಾವುದೇ ಅಪರಾಧ ಪ್ರಕರಣದ ತನಿಖೆ ಅಥವಾ ವಿಚಾರಣೆ ಮಾಡುವ ಅಧಿಕಾರಿಯು, ಹಣವನ್ನು ವರ್ಗಾಯಿಸಲು ಅಥವಾ ಠೇವಣಿ ಇಡಲು ಕೇಳುವುದಿಲ್ಲ. ಬ್ಯಾಂಕ್‌ಗಳು, ಮೊಬೈಲ್ ಫೋನ್‌ಗಳ ಮೂಲಕ ಕೆವೈಸಿ ಅಥವಾ ವೈಯಕ್ತಿಕ ಮಾಹಿತಿ ಪಡೆಯುವುದಿಲ್ಲ. ವಂಚನೆಯಾದಾಗ ಸೈಬರ್ ಕ್ರೈಮ್ ವಿಭಾಗದ ಸಹಾಯವಾಣಿ (1930) ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದರು.
ರಾಜ್ಯ ವಕೀಲ ಪರಿಷತ್‌ನ ಮಾಜಿ ಅಧ್ಯಕ್ಷ ಎಚ್.ಸಿ. ಶಿವರಾಮು, ‘ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಿದರೆ ಶೇ 50ರಷ್ಟು ಸೈಬರ್ ಅಪರಾಧಗಳು ಕಡಿಮೆಯಾಗುತ್ತವೆ. ಮೊಬೈಲ್ ಅವಲಂಬನೆ ಕಡಿಮೆಯಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು, ಅದನ್ನು ತಲುಪುವ ನಿಟ್ಟಿನಲ್ಲಿ ಪ್ರಯತ್ನ ಹಾಕಬೇಕು’ ಎಂದು ಹೇಳಿದರು.
ಚನ್ನಪಟ್ಟಣದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್. ಸುರೇಶ್, ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ ಉಪಾಧ್ಯಕ್ಷ ಕೆ. ವೆಂಕಟೇಶಮೂರ್ತಿ, ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಕೆಂಚೇಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಉಷಾಮಾಲಿನಿ, ಚನ್ನಪಟ್ಟಣ ಡಿವೈಎಸ್ಪಿ ಕೆ.ಸಿ. ಗಿರಿ, ಚನ್ನಪಟ್ಟಣ ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಟಿ.ವಿ. ಗಿರೀಶ್, ಪ್ರಧಾನ ಕಾರ್ಯದರ್ಶಿ ದೇವರಾಜು, ಉಪಾಧ್ಯಕ್ಷ ಎಸ್. ಬಿ ಧನಂಜಯ, ಜಂಟಿ ಕಾರ್ಯದರ್ಶಿ ಬಿ. ಕೃಷ್ಣಪ್ಪ, ಖಜಾಂಚಿ ಎನ್. ಹೇಮಂತ್ ಹಾಗೂ ಇತರರು ಇದ್ದರು.
ಫೇಸ್‌ಬುಕ್ ವಾಟ್ಸ್‌ಆ್ಯಪ್ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು. ಅಂತರ್ಜಾಲ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ– ಬಿ.ವಿ. ರೇಣುಕಾ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ
ಜನರನ್ನು ಡಿಜಿಟಲ್ ಬಂಧನದಲ್ಲಿರಿಸಿ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವಂಚಕರು ದೋಚುತ್ತಿದ್ದಾರೆ. ಹಣದ ಜೊತೆಗೆ ಜನರ ಜೀವದ ಜೊತೆಗೂ ಆಟವಾಡುತ್ತಿದ್ದಾರೆ. ಆನ್‌ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ– ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.