ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಗುರುವಾರ ವಿಜಯದಶಮಿ ಅಂಗವಾಗಿ ನಡೆದ ಬನ್ನಿ ಪೂಜೆಯೊಂದಿಗೆ ದಸರಾ ಹಬ್ಬವು ಸಂಪನ್ನಗೊಂಡಿತು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ. ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ಕಾರ್ಯದರ್ಶಿ ಎಚ್.ಕೆ. ಸುರೇಶ್ ಬಾಬು ಸೇರಿದಂತೆ ಹಲವು ಗಣ್ಯರು ಅಂತಿಮ ದಿನದ ಸಂಭ್ರಮಕ್ಕೆ ಸಾಕ್ಷಿಯಾದರು.
ಈ ವೇಳೆ ಮಾತನಾಡಿದ ಬೋರಲಿಂಗಯ್ಯ, ‘ಜಾನಪದ ಲೋಕದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಮಾತೃ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ, ನಮ್ಮ ಕಾರ್ಯಕ್ರಮಗಳನ್ನು ಪರಿಚಯಿಸುವುದರಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಸುರೇಶ್ ಬಾಬು ಮಾತನಾಡಿ, ‘ಎಚ್.ಎಲ್. ನಾಗೇಗೌಡರು ಕಟ್ಟಿರುವ ಜಾನಪದ ಲೋಕ ತುಂಬಾ ಆಕರ್ಷಕವಾಗಿದೆ. ಮೊದಲ ಬಾರಿಗೆ ದಸರಾ ಹಬ್ಬದ ಈ ಸಂದರ್ಭದಲ್ಲಿ ಜಾನಪದ ಲೋಕ ನೋಡಿ ಸಂತೋಷವಾಗಿದೆ. ಇಲ್ಲಿರುವ ಪ್ರವಾಸಿ ಸ್ಥಳಗಳು ಮತ್ತು ಜಾನಪದ ವಸ್ತು ಸಂಗ್ರಹಾಲಯ ವಿಶಿಷ್ಟವಾಗಿದ್ದು, ನಮ್ಮ ಪೂರ್ವಜರು ಮತ್ತು ಮೂಲ ಸಂಸ್ಕೃತಿಯನ್ನು ನೆನಪಿಸುತ್ತವೆ’ ಎಂದರು.
ಇಲಾಖೆಯ ಬೆಂಗಳೂರು ನಗರ ಜಿಲ್ಲಾ ಸಹಾಯಕ ನಿರ್ದೇಶಕ ಆರ್. ಚಂದ್ರಶೇಖರ್ ಮಾತನಾಡಿದರರು. ಇದೇ ಸಂದರ್ಭದಲ್ಲಿ ಕಲಾ ಶಾಲೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಪೂಜಾ ಕುಣಿತ, ಪಟ ಕುಣಿತ, ಕಂಸಾಳೆ ಕುಣಿತ ಗಮನ ಸೆಳೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.