ಹಾರೋಹಳ್ಳಿ: ಹಾರೋಹಳ್ಳಿ ದಸರಾ ಆಚರಣಾ ಸಮಿತಿಯಿಂದ ಚಾಮುಂಡೇಶ್ವರಿ 9ನೇ ವರ್ಷದ ದಸರಾ ಮಹೋತ್ಸವ ಅಂಗವಾಗಿ ಮಂಗಳವಾರ ಕುಸ್ತಿ ನಡೆಯಿತು.
ಅಖಾಡದಲ್ಲಿ ಪೈಲ್ವಾನರು ಎದುರಾಳಿಯನ್ನು ಮಣಿಸಿಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ, ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು.
ಬೆಂಗಳೂರು, ರಾಣಿಬೆನ್ನೂರು, ಮಂಡ್ಯ, ಕನಕಪುರ, ಮೈಸೂರು, ಶ್ರೀರಂಗಪಟ್ಟಣ, ಗುಲ್ಬರ್ಗ, ಬೆಳಗಾಂ, ದಾವಣಗೆರೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿ ಪಟುಗಳು ತಮ್ಮ ಕೌಶಲ ಮೆರೆದರು. 30 ನಿಮಿಷ ನಡೆದ ಪಂದ್ಯದಲ್ಲಿ ರೋಚಕತೆಯನ್ನು ಪ್ರದರ್ಶಿಸಲಾಯಿತು.
ಪೈಲ್ವಾನ್ ದಾವಣಗೆರೆ ಗಿರೀಶ್ ಹಾಗೂ ಬೆಳಗಾಂ ಪೈಲ್ವಾನ್ ಅಭಿಷೇಕ್ ನಡುವೆ ನಡೆದ ರೋಷಕ ಕುಸ್ತಿಯಲ್ಲಿ ದಾವಣಗೆರೆ ಗಿರೀಶ್ ಜಯವನ್ನು ತಮ್ಮದಾಗಿಸಿಕೊಂಡರು.
ಕನಕಪುರ ಮನೋಜ್ ಹಾಗೂ ಹೊಸಳ್ಳಿ ಮನೋಜ್ ನಡುವಿನ ಸೆಣೆಸಾಟದಲ್ಲಿ ಕನಕಪುರ ಮನೋಜ್ ಜಯಶೀಲರಾದರು. ಮಹಿಳಾ ಕುಸ್ತಿ ವಿಶೇಷತೆಯಲ್ಲಿ ಸಿಂಚನಾ ಮತ್ತು ದೀಪಾ ನಡುವಿನ ಕುಸ್ತಿ ಪಂದ್ಯದಲ್ಲಿ ಸಿಂಚನಾ ವಿಜಯ ಮಾಲೆ ತಮ್ಮದಾಗಿಸಿಕೊಂಡರು. ಮೇಳಾಪುರ ಚಂದು ಮತ್ತು ಕನಕಪುರ ನವೀನ್ ನಡುವೆ ನಡೆದ ಪಂದ್ಯದಲ್ಲಿ ಮೇಳಾಪುರ ಚಂದು ಜಯಗಳಿಸಿದರೆ, ಕನಕಪುರ ಪೈಲ್ವಾನ್ ಪವನ್ ಮತ್ತು ಸಿಡ್ಲಗಟ್ಟ ಬಾಬಾಜಾನ್ ಕುಸ್ತಿಯಲ್ಲಿ ಸಮಬಲ ಜಯಸಾಧಿಸಿದರು.
ಭದ್ರಾವತಿ ಪೈಲ್ವಾನ್ ಚನ್ನಬಸವ ವಿರುದ್ಧ ಪೈಲ್ವಾನ್ ಸಾದಿಕ್ ನಡೆದ ಕುಸ್ತಿಯಲ್ಲಿ ಚನ್ನಬಸವ ಜಯಶೀಲರಾದರು. ಮತ್ತೊಂದು ರೋಮಾಂಚನ ಹಿರಿಯರ ಕುಸ್ತಿಯಲ್ಲಿ ಕನಕಪುರ ಪೈಲ್ವಾನ್ ಶ್ರೀನಿವಾಸ್ ಮತ್ತು ಮೇಳಾಪುರ ಪೈಲ್ವಾನ್ ಬಾಲರಾಜು ಸಮಬಲ ಹೋರಾಟ ಸಾಧಿಸಿದರು.
ಸರ್ಕಾರಿ ಶಾಲಾ ಮೈದಾನದಲ್ಲಿ ಜರುಗಿದ ಕುಸ್ತಿ ಪಂದ್ಯಾವಳಿಗೆ ಅರುಣಾಚಲೇಶ್ವರ ದೇವಾಲಯದ ಧರ್ಮದರ್ಶಿ ಸಮಿತಿ ಅಧ್ಯಕ್ಷ ಆದಿತ್ಯ ರಸರಂಜನ್ ಚಾಲನೆ ನೀಡಿದರು.
ದಸರ ಆಚರಣಾ ಸಮಿತಿ ಅಧ್ಯಕ್ಷ ಗೌತಮ್ ಮರಿಲಿಂಗೇಗೌಡ ಮಾತನಾಡಿ, ಇಂದಿನ ಕುಸ್ತಿ ಅಖಾಡದಲ್ಲಿ ಪೈಲ್ವಾನರು ಉತ್ತಮ ಸೆಣೆಸಾಟ ನಡೆಸಿದ್ದಾರೆ. ನೋಡುಗರ ಮೈನವಿರೇರಿಸುವ ರೋಚಕ ದೃಶ್ಯಗಳು ವೀಕ್ಷಕರಿಗೆ ರಸದೌತಣ ನೀಡಿದವು. ನಾಗರಿಕತೆ ಸೋಗಿನಲ್ಲಿ ಇತ್ತೀಚೆಗೆ ಗ್ರಾಮೀಣ ಕ್ರೀಡೆ ನಶಿಸುತ್ತಿವೆ ಎಂದರು.
ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕುಸ್ತಿ ಆಯೋಜನೆ ಉತ್ತಮ ಪ್ರಯೋಜನವಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ರಾಜಮಹಾರಾಜರ ಕಾಲದಿಂದಲೂ ಜನರು ಕುಸ್ತಿ ಪಂದ್ಯಾವಳಿ ಮಾಡುತ್ತಾ ಬಂದಿದ್ದಾರೆ. ಮುಂದೆಯೂ ಕ್ರೀಡೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.
ದಸರಾ ಆಚರಣಾ ಸಮಿತಿ ಸಂಚಾಲಕ ವಿಜಯಕುಮಾರ್, ಮುರುಳಿಧರ್, ಮಜನಿಯಪ್ಪ, ಕೃಷ್ಣಪ್ಪ, ಜಗದೀಶ್, ರಾಘವೇಂದ್ರ, ಸುರೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.