ADVERTISEMENT

ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹ

ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ l ಶೀಘ್ರ ಸಭೆ ಕರೆಯುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 14:36 IST
Last Updated 16 ಜೂನ್ 2020, 14:36 IST
ರೈತಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಅವರು ತಹಶೀಲ್ದಾರ್‌ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು
ರೈತಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಅವರು ತಹಶೀಲ್ದಾರ್‌ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು   

ಮಾಗಡಿ: ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಹಾರ ಸೂಚಿಸಲು ಅಧಿಕಾರಿಗಳ ಸಭೆ ಕರೆಯಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಒತ್ತಾಯಿಸಿದರು.

ಸಂಘದ ವತಿಯಿಂದ ಮಂಗಳವಾರ ತಹಶೀಲ್ದಾರ್‌ಶ್ರೀನಿವಾಸ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು,ರೈತರ ಪಂಪ್‌ ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಲಾಕ್‌ಡೌನ್‌ ವೇಳೆ ರೈತರು ಬೆಳೆದ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಸಿಗದೇ ತೀವ್ರ ಸಂಕಟಕ್ಕೆ ಸಿಲುಕಿದ್ದರು. ಅವರಿಗೆ ಬೆಳೆ ‍ಪರಿಹಾರವೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಹಾಲು ಉತ್ಪಾದಕರಿಗೆ ಹಣ ತಲುಪಿಲ್ಲ. ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಮಾಗಡಿಯತ್ತ ಗಮನ ಹರಿಸುತ್ತಿಲ್ಲ. ಹುಲಿಕಟ್ಟೆ ರಾಣಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊರೊನಾ ಐಸೊಲೇಷನ್‌ ಕೇಂದ್ರದಲ್ಲಿ ಭೋಜನ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲಿದ್ದ ಕೊರೊನಾ ಸೋಂಕಿತರು ಹಸಿವಿನಿಂದ ಕಂಗಾಲಾಗಿದ್ದರು ಎಂದು ಹೇಳಿದರು.

ADVERTISEMENT

ಅವ್ಯವಸ್ಥೆ ಕುರಿತುಜಿಲ್ಲಾ ಆರೋಗ್ಯ ಅಧಿಕಾರಿ ಅವರ ಗಮನಕ್ಕೆ ತಂದರೆ ಸರ್ಕಾರದಿಂದ ಹಣ ಬಂದಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಕೊರೊನಾ ಸೇನಾನಿಗಳಿಗೆ ಮಾಸ್ಕ್‌, ಸ್ಯಾನಿಟೈಜರ್ ಸೇರಿದಂತೆ ಸುರಕ್ಷತಾ ಪರಿಕರ ವಿತರಣೆಯಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್‌ ವ್ಯವಸ್ಥೆ ಸರಿಯಾಗಿಲ್ಲ. ಇಂಥ ನೂರಾರು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕಚೇರಿಗಳಲ್ಲಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ, ಕೃಷಿ, ತೋಟಗಾರಿಕೆ, ಸಾಮಾಜಿಕ ಅರಣ್ಯ, ರೇಷ್ಮೆ ಇತರೆ ಇಲಾಖೆಗಳ ಅಧಿಕಾರಿಗಳು ಕಚೇರಿಗೆ ಬರುವುದು ಅಪರೂಪವಾಗಿದೆ. ಜಿ.ಪಂ ಮತ್ತು ತಾ.ಪಂ. ಸದಸ್ಯರು ಜನರತ್ತ ಗಮನಿಸುತ್ತಿಲ್ಲ ಎಂದು ಹೇಳಿದರು.

ರೈತ ಸಂಘದ ಕಾರ್ಯದರ್ಶಿ ಮಧುಗೌಡ, ಮಂಜುನಾಥ, ದೊಡ್ಡರಂಗಯ್ಯ, ರಂಗಸ್ವಾಮಯ್ಯ, ಗೊಲ್ಲರ ಹಟ್ಟಿ ಜಯಣ್ಣ, ಮತ್ತದ ಹನುಮಂತರಾಯಪ್ಪ, ಗಿರಿಗೌಡ ಹಾಗೂ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.