ADVERTISEMENT

ರಾಮನಗರ: ದಸರಾ ಗೊಂಬೆಗಳಿಗೆ ಕುದುರಿದ ಬೇಡಿಕೆ

ಲಾಕ್‌ಡೌನ್‌ ಸಂಕಷ್ಟದಲ್ಲೂ ಚನ್ನಪಟ್ಟಣದಲ್ಲಿ ತಯಾರಾಗುತ್ತಿವೆ ವಿಧವಿಧದ ಗೊಂಬೆಗಳು

ಆರ್.ಜಿತೇಂದ್ರ
Published 11 ಸೆಪ್ಟೆಂಬರ್ 2020, 2:31 IST
Last Updated 11 ಸೆಪ್ಟೆಂಬರ್ 2020, 2:31 IST
ದಸರಾ ಅಂಬಾರಿ ಗೊಂಬೆಯೊಂದಿಗೆ ಈಶ್ವರ್‌
ದಸರಾ ಅಂಬಾರಿ ಗೊಂಬೆಯೊಂದಿಗೆ ಈಶ್ವರ್‌   

ರಾಮನಗರ: ಮೈಸೂರಿನಲ್ಲಿ ಈ ಬಾರಿ ದಸರಾ ಸಿದ್ಧತೆ ಇನ್ನೂ ಆರಂಭಗೊಂಡಿಲ್ಲ. ಆದರೆ, ಚನ್ನಪಟ್ಟಣದಲ್ಲಿ ಮಾತ್ರ ಲಾಕ್‌ಡೌನ್ ನಡುವೆಯೂ ದಸರಾ ಗೊಂಬೆಗಳ ತಯಾರಿ ಜೋರಾಗಿದ್ದು, ಬೇಡಿಕೆಯೂ ಕುದುರುತ್ತಿದೆ.

ದಸರಾ ಎಂದ ಕೂಡಲೇ ನೆನಪಾಗುವುದು ಗೊಂಬೆಗಳ ಪ್ರದರ್ಶನ. ಅದರಲ್ಲೂ ಚನ್ನಪಟ್ಟಣದ ಗೊಂಬೆಗಳು ಮೈಸೂರು ಅರಮನೆ ಸೇರಿದಂತೆ ನಾಡಿನ ಎಲ್ಲೆಡೆ ಪ್ರತಿಷ್ಟಾಪಿಸಲ್ಪಟ್ಟಿವೆ. ಚನ್ನಪಟ್ಟಣಕ್ಕೆ ಗೊಂಬೆಗಳನ್ನು ಪರಿಚಯಿಸಿದ ಕಾಲದಿಂದಲೂ ಇಲ್ಲಿಂದ ಮೈಸೂರು ಅರಮನೆಗೆ ಗೊಂಬೆಗಳನ್ನು ಕೊಂಡೊಯ್ಯಲಾಗುತ್ತಿತ್ತು. ನವರಾತ್ರಿ ಸಮಯದಲ್ಲಿ ಮನೆಮನೆಗಳಲ್ಲಿ ಈ ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ನಡೆದುಬಂದಿದೆ. ನೂರಾರು ವರ್ಷದಿಂದ ಇಲ್ಲಿನ ಕುಟುಂಬಗಳು ಈ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಚನ್ನಪಟ್ಟಣದಲ್ಲಿ ದಸರಾ ಗೊಂಬೆಗಳನ್ನು ತಯಾರಿಸುವವರಲ್ಲಿ ಈಶ್ವರ್‌ ಪ್ರಮುಖರು. ಅವರ ಗೊಂಬೆಗಳ ಕಾರ್ಖಾನೆಯಲ್ಲಿ ಸದ್ಯ ಈ ಗೊಂಬೆಗಳ ತಯಾರಿಕೆ ನಡೆದಿದೆ. ಕಳೆದ 87 ವರ್ಷದಿಂದಲೂ ಅವರ ಕುಟುಂಬ ಈ ಗೊಂಬೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅವರ ಮಡದಿ, ಮಕ್ಕಳು ಹಾಗೂ ಸಹ ಕಾರ್ಮಿಕರಾದಿಯಾಗಿ ಎಲ್ಲರೂ ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಚನ್ನಪಟ್ಟಣದ ಕುವೆಂಪುನಗರದಲ್ಲಿರುವ ಶ್ರೀ ಟಾಯ್ಸ್ ಮತ್ತು ಈಶ್ವರ್‍ ಟಾಯ್ಸ್‌ ಮಳಿಗೆಗಳಲ್ಲಿ ಈ ಗೊಂಬೆಗಳು ಮಾರಾಟಕ್ಕೆ ಲಭ್ಯ ಇದೆ. ಆನೆ, ಒಂಟೆ, ಕುದುರೆಗಳು, ಮೈಸೂರು ಅರಮನೆ, ಅರಮನೆ ದರ್ಬಾರ್‌, ಕೆ.ಆರ್‌.ವೃತ್ತ, ದೊಡ್ಡ ಗಡಿಯಾರ, ದಸರಾ ಮೆರವಣಿಗೆ, ಅಷ್ಟ ದಿಕ್ಪಾಲಕರು, ದಶಾವಾತಾರ, ಹಳ್ಳಿ ವಾತಾರಣ, ಜಾನಪದ ಆಚರಣೆಗಳು.... ಹೀಗೆ ದಸರಾ ಆಚರಣೆಗೆ ವಿಶೇಷವಾಗಿ ಇಲ್ಲಿ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಇದರಲ್ಲೇ 100-120 ವಿನ್ಯಾಸಗಳ ಗೊಂಬೆ ತಯಾರಿಸುವುದಾಗಿ ಈಶ್ವರ್‌ ಹೇಳುತ್ತಾರೆ. ಈ ವರ್ಷ ಲಾ‌ಕ್‌ಡೌನ್‌ನಿಂದಾಗಿ ಗೊಂಬೆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಸಾಕಷ್ಟು ಮಂದಿ ಕೆಲಸವಿಲ್ಲದೇ ಕೈಚೆಲ್ಲಿ ಕುಳಿತಿದ್ದರು. ಆದರೆ, ದಸರಾ ಕಾರಣಕ್ಕೆ ಸದ್ಯ ಈ ಕಾರ್ಮಿಕರಿಗೆ ಉದ್ಯೋಗ ದೊರೆತಿದೆ. ಸಾಮಾನ್ಯವಾಗಿ ದಸರಾ ಗೊಂಬೆಗಳನ್ನು ಆಲೆ ಮರದಿಂದಲೇ ತಯಾರಿಸಲಾಗುತ್ತದೆ. ಇದಲ್ಲದೆ ಬೇವು, ಹೊನ್ನೆ ಹಾಗೂ ಬೀಟೆ ಮರಗಳನ್ನೂ ಬಳಸಿಕೊಳ್ಳಲಾಗುತ್ತದೆ. ನೈಸರ್ಗಿಕ ಅರಗಿನ ಬಣ್ಣದಲ್ಲಿ ಇವುಗಳಿಗೆ ಚಿತ್ತಾರ ಬಿಡಿಸಲಾಗುತ್ತದೆ.

‘ಸಾಮಾನ್ಯವಾಗಿ ಪ್ರತಿ ಆಗಸ್ಟ್‌ನಿಂದ ದಸರಾ ಗೊಂಬೆಗಳಿಗೆ ಬೇಡಿಕೆ ಶುರುವಾಗಿ ದಸರಾ ಮುಗಿಯುವವರೆಗೂ ಬೇಡಿಕೆ ಇರುತ್ತಲೇ ಹೋಗುತ್ತದೆ. ಈ ವರ್ಷ ಕೋವಿಡ್‌ ಭೀತಿಯಿಂದಾಗಿ ವ್ಯಾಪಾರ ಹೇಗೋ ಏನೋ ಎಂಬ ಚಿಂತೆ ಇತ್ತು. ಆದರೆ, ಸದ್ಯ ನಾಡಿನ ವಿವಿಧ ಭಾಗಗಳಿಂದ ಬೇಡಿಕೆ ಬರುತ್ತಿದೆ. 300ಕ್ಕೂ ಹೆಚ್ಚು ಸೆಟ್‌ ಗೊಂಬೆಗಳನ್ನು ಈಗಾಗಲೇ ಉತ್ಪಾದಿಸಿದ್ದು, ನಮ್ಮ ಮಳಿಗೆಗಳ ಜತೆಗೆ ಸಗಟು ಮಾರಾಟಗಾರರಿಗೂ ನೀಡುತ್ತಿದ್ದೇವೆ’ ಎಂದು ಈಶ್ವರ್‌ ಹೇಳುತ್ತಾರೆ.

ADVERTISEMENT

‘ದಸರಾ ಗೊಂಬೆಗಳ ಆಕಾರದ ಮೇಲೆ ಅವುಗಳ ಬೆಲೆ ನಿರ್ಧಾರವಾಗುತ್ತದೆ. ₹100ನ ಪುಟ್ಟ ಗೊಂಬೆಯಿಂದ ಹಿಡಿದು ₹4-5 ಸಾವಿರದವರೆಗಿನ ಸೆಟ್‌ ಗೊಂಬೆಗಳೂ ಇವೆ. ಅರಮನೆ, ಅಂಬಾರಿ, ದಸರಾ ಮೆರವಣಿಗೆ ಮೊದಲಾದ ಗೊಂಬೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಆನ್‌ಲೈನ್‌ನಲ್ಲೂ ಹೆಚ್ಚು ಪ್ರಚಾರ ಆಗುತ್ತಿರುವ ಕಾರಣ ಎಲ್ಲೆಡೆಯಿಂದ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.