ADVERTISEMENT

ಸರ್ವಾಧಿಕಾರಕ್ಕೆ ತಿರುಗುವ ಆತಂಕದಲ್ಲಿ ಪ್ರಜಾಪ್ರಭುತ್ವ

‘ಕೆಂಗಲ್ ಕೊರಳು’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ: ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 17:57 IST
Last Updated 24 ಆಗಸ್ಟ್ 2025, 17:57 IST
<div class="paragraphs"><p>ರಾಮನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ಶ್ರೀ ಎಚ್.ವಿ. ಹನುಮಂತು ಕಲಾ ಬಳಗ ಹಾಗೂ ಅಂಕನಹಳ್ಳಿ ಪ್ರಕಾಶನವು ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಣ್ಯರು ಗಾಯಕ ಕೆಂಗಲ್ ವಿನಯ್ ಕುಮಾರ್ ಕುರಿತ ‘ಕೆಂಗಲ್ ಕೊರಳು’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು. </p></div>

ರಾಮನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ಶ್ರೀ ಎಚ್.ವಿ. ಹನುಮಂತು ಕಲಾ ಬಳಗ ಹಾಗೂ ಅಂಕನಹಳ್ಳಿ ಪ್ರಕಾಶನವು ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಗಣ್ಯರು ಗಾಯಕ ಕೆಂಗಲ್ ವಿನಯ್ ಕುಮಾರ್ ಕುರಿತ ‘ಕೆಂಗಲ್ ಕೊರಳು’ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.

   

ರಾಮನಗರ: ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸರ್ವಾಧಿಕಾರವಾಗಿ ಪರಿವರ್ತನೆಯಾಗುವ ಆತಂಕವನ್ನು ಕಳೆದೆರಡು ದಶಕಗಳಿಂದ ಎದುರಿಸುತ್ತಲೇ ಇದೆ. ಶಾಸನಸಭೆಗಳಿಗೆ ಯೋಗ್ಯರಿಗಿಂತ ಅಯೋಗ್ಯರೇ ಹೆಚ್ಚು ಆಯ್ಕೆಯಾಗುತ್ತಿರುವುದು ಇದಕ್ಕೆ ಕಾರಣ’ ಎಂದು ಸಾಹಿತಿ ಹಾಗೂ ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.

ನಗರದ ಎಂ.ಎಚ್. ಕಾಲೇಜು ಸಭಾಂಗಣದಲ್ಲಿ ಶ್ರೀ ಎಚ್.ವಿ. ಹನುಮಂತು ಕಲಾ ಬಳಗ ಹಾಗೂ ಅಂಕನಹಳ್ಳಿ ಪ್ರಕಾಶನವು ಭಾನುವಾರ ಹಮ್ಮಿಕೊಂಡಿದ್ದ ಗಾಯಕ ಕೆಂಗಲ್ ವಿನಯ್ ಕುಮಾರ್ ಕುರಿತ ‘ಕೆಂಗಲ್ ಕೊರಳು’ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಈ ಆತಂಕ ದೂರವಾಗಬೇಕಾದರೆ ನಾವು ಆರಿಸಿ ಕಳಿಸುವವರು ಪ್ರಾಮಾಣಿಕರಾಗಿರಬೇಕು. ಜನಪ್ರತಿನಿಧಿಗಳಿಗೆ ಸಂಸ್ಕೃತಿ, ಸಾಹಿತ್ಯ ಹಾಗೂ ಸಾಂಸ್ಕೃತಿಕತೆಯ ಒಡನಾಟ ಇದ್ದಾಗ ನೈತಿಕ ರಾಜಕಾರಣ ಮಾಡುತ್ತಾರೆ. ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ. ಅಂತಹವರೂ ಇಂದಿಗೂ ಇದ್ದಾರೆ. ರಾಮನಗರದ ಸಾಂಸ್ಕೃತಿಕ ರಾಯಭಾರಿ ಎನಿಸಿರುವ ಕೆ. ಶೇಷಾದ್ರಿ ಶಶಿ ಆ ಸಾಲಿಗೆ ಸೇರುವ ರಾಜಕಾರಣಿ’ ಎಂದು ಶ್ಲಾಘಿಸಿದರು.

‘ಅಭಿನಂದನಾ ಸಮಾರಂಭ ಎಂದರೆ ವ್ಯಕ್ತಿ ಪ್ರದರ್ಶನದ ವೇದಿಕೆ ಎಂಬ ಮಟ್ಟಕ್ಕಿಳಿದಿದೆ. ಸ್ವಾಮೀಜಿಗಳು ಮತ್ತು ಜಗದ್ಗುರುಗಳು ಸಹ ಇದರ ಮೋಹಕ್ಕೆ ಬಿದ್ದಿದ್ದಾರೆ. ರಾಜಕಾರಣಿಗಳೂ ಪೈಪೋಟಿಗೆ ಬಿದ್ದು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ವಿನಯ್ ಅವರ ಈ ಸಮಾರಂಭ ಅತಿಶಯೋಕ್ತಿ ಎನಿಸದೆ ಅರ್ಥಪೂರ್ಣವಾಗಿದೆ. ಅವರ ಕಲಾಸೇವೆ ಮತ್ತು ಪ್ರತಿಭೆಗೆ ಸೂಕ್ತ ಮನ್ನಣೆ ಸಿಕ್ಕಿದೆ’ ಎಂದು ಹೇಳಿದರು.

‘ಕೆಂಗಲ್ ಕೊರಳು’ ಗ್ರಂಥ ಬಿಡುಗಡೆ ಮಾಡಿದ ಗಣ್ಯರು, ವಿನಯ್ ಕುಮಾರ್ ಅವರಿಗೆ ‘ಗಾನ ಗಾರುಡಿಗ’ ಪ್ರಶಸ್ತಿ ಪ್ರದಾನ ಮಾಡಿದರು. ಜೊತೆಗೆ ಸಾಂಸ್ಕೃತಿಕ ಸಂಘಟಕ ರಾ.ಬಿ. ನಾಗರಾಜು ಅವರಿಗೆ ‘ಸಾಂಸ್ಕೃತಿಕ ಧ್ರುವತಾರೆ’, ಗಾಯಕ ದೇವರಾಜು ಕೆ. ಮಲಾರ ಅವರಿಗೆ ‘ನವರಸ ಗಾಯಕ’, ಬೊಮ್ಮಚ್ಚನಹಳ್ಳಿ ಗೋಪಾಲ್ ಅವರಿಗೆ ‘ಮನ ಮಿಡಿದ ಗಾಯಕ’ ಹಾಗೂ ಸೌಜನ್ಯ ಕೃಷ್ಣಮೂರ್ತಿ ಅವರಿಗೆ ‘ಉಜ್ವಲ ಗಾಯನತಾರೆ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸೇವಾ ನಿವೃತ್ತಿ ಹೊಂದಿದ ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಎಚ್. ನಾಗರಾಜ್ ಅವರನ್ನು‌ ಸನ್ಮಾನಿಸಲಾಯಿತು.

ವಾಣಿಜ್ಯ ತೆರಿಗೆಗಳ‌ ಇಲಾಖೆ ಸಹಾಯಕ ಆಯುಕ್ತ ಕೆ. ದೊರೈ ಆಶಯ ನುಡಿ ಹಾಗೂ ಸಾಹಿತಿ ಎಚ್.ವಿ. ಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹನುಮಂತು ಕಲಾ ಬಳಗದ ಎಚ್.ವಿ. ಹನುಮಂತು, ಅಂಕನಹಳ್ಳಿ ಪ್ರಕಾಶನದ ಡಾ. ಅಂಕನಹಳ್ಳಿ ಪಾರ್ಥ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಅಧ್ಯಕ್ಷ ಬಿಳಗುಂಬ ದಿನೇಶ್, ಎಸ್‌ಸಿ–ಎಸ್‌ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಸ್. ಜೈಪ್ರಕಾಶ್, ದಲಿತ ಸಂಘಟನೆಗಳ‌ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ, ಲೇಖಕಿ ಶೈಲಾ ಶ್ರೀನಿವಾಸ್, ಗಾಯಕ ಬ್ಯಾಡರಹಳ್ಳಿ ಶಿವಕುಮಾರ್, ಡಾನ್ಸ್ ಮಾಸ್ಟರ್ ರೇಣುಕಾ ಪ್ರಸಾದ್ ಹಾಗೂ ಇತರರು ಇದ್ದರು.

ಆರೋಗ್ಯ ಮೇಲ್ವಿಚಾರಣಾಧಿಕಾರಿ ಬಿ.ಎಸ್‌. ಗಂಗಾಧರ್ ನಿರೂಪಣೆ ಮಾಡಿದರು. ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ವಂದನಾರ್ಪಣೆ ಮಾಡಿದರು.

ವಿನಯ್‌ ಕುಮಾರ್ ಸೇವೆಯಿಂದಷ್ಟೇ ನಿವೃತ್ತರಾಗಿದ್ದಾರೆಯೆ ಹೊರತು ಪ್ರವೃತ್ತಿಯಿಂದಲ್ಲ. ಅರವತ್ತಾದ ಬಳಿಕ ಮತ್ತಷ್ಟು ಅರಳಬೇಕು. ಇನ್ಮುಂದೆ ಅವರ ಪ್ರವೃತ್ತಿಗೆ ಪೂರ್ಣಾವಧಿ‌ ಸಿಕ್ಕಿದೆ. ವಿನಯ್ ಅವರ ಮೂರ್ತಿ ಉತ್ಸವವಾಗಿ ಬೆಳಗಲಿ

ಡಾ. ಎಂ. ಬೈರೇಗೌಡ ಜಾನಪದ ವಿದ್ವಾಂಸ

ಕಲೆ ಮೂಲಕ ಸಾಮಾಜಿಕ ಬದಲಾವಣೆಗೆ ಹಲವು ಕಲಾವಿದರು ಶ್ರಮಿಸಿಕೊಂಡು ಬಂದಿದ್ದಾರೆ. ಅದರಲ್ಲಿ ಕಲಾಸೇವೆಗೆ ಅರ್ಪಿಸಿಕೊಂಡಿರುವ ವಿನಯ್ ಕುಮಾರ್ ಸಹ ಪ್ರಮುಖರು. ಗಾಯಕ ಸ್ವರ ಸಂಯೋಜಕರೂ ಆಗಿರುವ ಅವರು ಹೆಸರಿಗೆ ತಕ್ಕಂತೆ ವಿನಯವಂತ

ಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ

ಎಚ್.ವಿ. ಹನುಮಂತು ನನ್ನ ಗಾಯನಯಾನದ ಗುರು. ಈ ಸುದೀರ್ಘ ಹಾದಿಯಲ್ಲಿ ಸಾಹಿತ್ಯ ಪರಿಷತ್ತು ಸಂಘ–ಸಂಸ್ಥೆ ಸಂಘಟನೆಗಳು ಅವಕಾಶಗಳನ್ನು ನೀಡಿವೆ. ಹಲವರು ಅಭಿಮಾನದಿಂದ ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಾರೆ. ಎಲ್ಲರಿಗೂ ನಾ ಚಿರಋಣಿ

ವಿನಯ್‌ ಕುಮಾರ್ ಗಾಯಕ

‘ಸಾಂಸ್ಕೃತಿಕ ಸಿರಿ ಹೆಚ್ಚಿಸಿದ ವ್ಯಕ್ತಿ’

‘ಪ್ರತಿಭಾ ವಿನಿಮಯದ ನೈಜ ವ್ಯಕ್ತಿತ್ವದ ಸಮಕಾಲೀನ ಚಿತ್ರಣವನ್ನು ವಿನಯ್‌ ಕುಮಾರ್ ಅವರ ಈ ಅಭಿನಂದನಾ ಗ್ರಂಥ ಕಟ್ಟಿ ಕೊಡುತ್ತದೆ. ಹೆಚ್ಚು ಮಾತನಾಡದ ಅವರ ಮೌನದಲ್ಲೂ ಒಂದು ರಾಗವಿದೆ. ಸಾಹಿತ್ಯದ ರಸಗಳನ್ನೇ ರಾಗಗಳಾಗಿ ಬಳಸಿಕೊಂಡು ಸಮಾಜದ ರೋಗಗಳ ಕುರಿತು ಜಾಗೃತಿ ಮೂಡಿಸುವ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ಹಲವು ಕವಿಗಳ ಕಾವ್ಯಗಳಿಗೆ ಜೀವ ತುಂಬಿ ದನಿಯಾಗಿದ್ದಾರೆ. ನಮ್ಮ‌ ಜಿಲ್ಲೆಯ ಸಾಂಸ್ಕೃತಿಕ ಸಿರಿ ಹೆಚ್ಚಿಸಿದ್ದಾರೆ’ ಎಂದು ಪುಸ್ತಕ ಕುರಿತು ಮಾತನಾಡಿದ ಲೇಖಕ ಕೊತ್ತಿಪುರ‌ ಜಿ. ಶಿವಣ್ಣ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.