ADVERTISEMENT

ರಾಮನಗರ | ಅರಸು ಜಯಂತಿ ಯಶಸ್ವಿಗೊಳಿಸಿ: ಶಿವಕುಮಾರ ಚೌಡಶೆಟ್ಟಿ ಮನವಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 2:22 IST
Last Updated 15 ಸೆಪ್ಟೆಂಬರ್ 2025, 2:22 IST
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕುಂಬಾರ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಿವಕುಮಾರ ಚೌಡಶೆಟ್ಟಿ, ರಾಜ್ಯಾಧ್ಯಕ್ಷ ನಿತ್ಯಾಭರಣ ಚೌಡಶೆಟ್ಟಿ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ನಾರಾಯಣ್ ಹಾಗೂ ಇತರರು ಇದ್ದರು
ರಾಮನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕುಂಬಾರ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಿವಕುಮಾರ ಚೌಡಶೆಟ್ಟಿ, ರಾಜ್ಯಾಧ್ಯಕ್ಷ ನಿತ್ಯಾಭರಣ ಚೌಡಶೆಟ್ಟಿ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ನಾರಾಯಣ್ ಹಾಗೂ ಇತರರು ಇದ್ದರು   

ರಾಮನಗರ: ‘ಜಿಲ್ಲಾಡಳಿತ ಹಾಗೂ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಸೆ. 19ರಂದು ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ 110ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕುಂಬಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು’ ಎಂದು ಅಖಿಲ ಭಾರತ ಕುಂಬಾರ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಿವಕುಮಾರ ಚೌಡಶೆಟ್ಟಿ ಮನವಿ ಮಾಡಿದರು.

‘ಈ ಸಲ ಅರಸು ಜಯಂತಿಯನ್ನು ಎಲ್ಲಾ ಹಿಂದುಳಿದ ಸಮುದಾಯಗಳನ್ನು ಒಳಗೊಂಡು ವಿಶೇಷವಾಗಿ ಮತ್ತು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಂದು ಮಾಗಡಿ ರಸ್ತೆಯ ಕೆಂಪೇಗೌಡ ವೃತ್ತದಿಂದ ನಡೆಯುವ ಮೆರವಣಿಗೆಯಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಕಳಸದ ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ’ ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಕುಂಬಾರ ಸಮುದಾಯದ ಜನಸಂಖ್ಯೆ ಸುಮಾರು 22 ಸಾವಿರ ಇದೆ. ಕಾರ್ಯಕ್ರಮದಲ್ಲಿ ಕನಿಷ್ಠ ಐದು ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಆ ಮೂಲಕ ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತರಲಿದ್ದಾರೆ. ಆ ಮೂಲಕ, ಹಿಂದುಳಿದ ಸಮುದಾಯಗಳ ಒಗ್ಗಟ್ಟು ಪ್ರದರ್ಶನಕ್ಕೆ ಕಾರ್ಯಕ್ರಮ ವೇದಿಕೆಯಾಗಲಿದೆ’ ಎಂದರು.

ADVERTISEMENT

ಮಹಾಸಭಾದ ರಾಜ್ಯಾಧ್ಯಕ್ಷ ‌ನಿತ್ಯಾಭರಣ ಚೌಡಶೆಟ್ಟಿ ಮಾತನಾಡಿ, ‘ಸುಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕಕಾಗಿ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ. ಅರಸು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಉಪ ಮುಖ್ಯಮಂತ್ರಿ ಸೇರಿದಂತೆ ಸಚಿವರಿಗೆ ಸಮುದಾಯದ ಸಮಸ್ಯೆಗಳನ್ನು ಗಮನಕ್ಕೆ ತಂದು ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ, ‘ನಮ್ಮ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶಶಿಕಲಾ ಚೌಡಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಅರಸು ಜಯಂತಿ ಕಾರ್ಯಕ್ರಮದ ದಿನವೇ ಪದಗ್ರಹಣ ಸಹ ನಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದ ಜನರು, ಮುಖಂಡರು ಬೆಂಬಲ ನೀಡಿ ಯಶಸ್ಸಿಗೆ ದುಡಿಯುತ್ತಿದ್ದಾರೆ’ ಎಂದರು.

ಒಕ್ಕುಟದ ಪ್ರಧಾನ ಕಾರ್ಯದರ್ಶಿ ನಾರಾಯಣ್, ಮುಖಂಡರಾದ ಕೆ.ಟಿ. ಕೃಷ್ಣಪ್ಪ, ವೆಂಕಟೇಶ್, ವೆಂಕಟರಾಜು, ರಮೇಶ್, ಚಂದ್ರಶೇಖರ್, ಕೃಷ್ಣಪ್ಪ, ಅರ್ಕಪ್ಪ, ಕುಮಾರ್, ಬಸವರಾಜು, ರಾಮಕೃಷ್ಣ, ಚಂದ್ರಪ್ಪ, ನಾಗೇಂದ್ರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.