ಹಣ
ರಾಮನಗರ: ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಆಬಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹಂಚಿಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಯಕನಪಾಳ್ಯ ಗ್ರಾಮ ಹಾಗೂ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಳ್ಯ ಗ್ರಾಮಗಳನ್ನು ಗುರುತಿಸಲಾಗಿದೆ.
ಈ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬುಡಕಟ್ಟು ಜನಾಂಗದವರು ಡೆವಲಪ್‌ಮೆಂಟ್ ಆಫ್ ಹೋಮ್ ಸ್ಟೇಸ್ ಇನ್ ಟ್ರೈಬಲ್ ಏರಿಯಾಸ್ ಯೋಜನೆ ಉಪಯೋಗಿಸಿಕೊಳ್ಳಲು ಅರ್ಹ ಆಸಕ್ತ ವ್ಯಕ್ತಿ/ಕುಟುಂಬದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೋಂಸ್ಟೇ ನಿರ್ಮಿಸಲು ₹5 ಲಕ್ಷ ಹಾಗೂ ನವೀಕರಿಸಲು ₹3 ಲಕ್ಷ ಸಹಾಯಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಬುಡಕಟ್ಟು ಸಮುದಾಯವಿರುವ ಗ್ರಾಮಗಳಲ್ಲಿ ಆತಿಥ್ಯ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವುದು ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸುವುದಾಗಿದೆ. ನಾಯಕನಪಾಳ್ಯ ಹಾಗೂ ಹೂಳ್ಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಬುಡಕಟ್ಟು ಜನಾಂಗದವರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳೊಂದಿಗೆ ಆಗಸ್ಟ್ 11ರೊಳಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ (ಪರಿಶಿಷ್ಟ ವರ್ಗ) ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಮನೆಯ ದಾಖಲೆ, ಮನೆಯ ಫೋಟೊ, ಘೋಷಣೆ ಫಾರಂ, ಗ್ರಾಮ ಪಂಚಾಯತಿ ಎನ್‌ಒಸಿ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ: 9535167637 ಸಂಪರ್ಕಿಸಬೇಕು ಎಂದು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.