ADVERTISEMENT

ಬಮೂಲ್‌ ನಿರ್ದೇಶಕರ ಪದಗ್ರಹಣಕ್ಕೆ ಅಡ್ಡಿ

ಎಸ್.ಲಿಂಗೇಶ್ ಕುಮಾರ್ ಅಧಿಕಾರ ಸ್ವೀಕಾರಕ್ಕೆ ಜೆಡಿಎಸ್‌ ಮುಖಂಡರ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:23 IST
Last Updated 28 ಜನವರಿ 2023, 6:23 IST
ಚನ್ನಪಟ್ಟಣದ ಬಮೂಲ್ ಶಿಬಿರ ಕಚೇರಿ ಎದುರು ಜಮಾಯಿಸಿದ್ದ ಇಬ್ಬರು ನಿರ್ದೇಶಕ ಬೆಂಬಲಿಗರು
ಚನ್ನಪಟ್ಟಣದ ಬಮೂಲ್ ಶಿಬಿರ ಕಚೇರಿ ಎದುರು ಜಮಾಯಿಸಿದ್ದ ಇಬ್ಬರು ನಿರ್ದೇಶಕ ಬೆಂಬಲಿಗರು   

ಚನ್ನಪಟ್ಟಣ: ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಲು ನಗರದ ಬಮೂಲ್ ಶಿಬಿರ ಕಚೇರಿಗೆ ತೆರಳಿದ ಸಂದರ್ಭದಲ್ಲಿ ಚುನಾಯಿತ ನಿರ್ದೇಶಕ ಎಚ್.ಸಿ ಜಯಮುತ್ತು ಮತ್ತು ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.

ಎಸ್.ಲಿಂಗೇಶ್ ಕುಮಾರ್ ಅವರು ಬೆಳಿಗ್ಗೆ ಬಮೂಲ್ ಶಿಬಿರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲು ಆಗಮಿಸಿದರು. ಉಪ ವ್ಯವಸ್ಥಾಪಕರ ಕೊಠಡಿ ಬಿಟ್ಟುಕೊಡಲು ಅಧಿಕಾರಿಗಳು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚುನಾಯಿತ ನಿರ್ದೇಶಕ ಜಯಮುತ್ತು, ನಾಮಿನಿ ನಿರ್ದೇಶಕರಿಗೆ ಕೊಠಡಿ ನೀಡಲು ಅವಕಾಶವಿಲ್ಲ ಎಂದು ಪಟ್ಟು ಹಿಡಿದರು.

ಇದಕ್ಕೆ ಆಕ್ಷೇಪಿಸಿದ ಲಿಂಗೇಶ್ ಕುಮಾರ್ ಇದನ್ನು ಹೇಳಲು ಬೇರೆಯವರಿಗೆ ಅಧಿಕಾರವಿಲ್ಲ. ಬಮೂಲ್ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದಂತೆ ನನಗೆ ಅವಕಾಶ ನೀಡಿ ಎಂದು ಪಟ್ಟುಹಿಡಿದರು. ಇದರಿಂದ ಬಮೂಲ್ ಶಿಬಿರಾಧಿಕಾರಿ ಹೇಮಂತ್ ಗೊಂದಲಕ್ಕೆ ಒಳಗಾಗುವಂತಾಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು, ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಮಂತ್ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೇಮಂತ್, ಬಮೂಲ್ ಎಂ.ಡಿ ಬಿಟ್ಟುಕೊಡುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ADVERTISEMENT

ಇದರಿಂದ ಕೋಪಗೊಂಡ ಜಯಮುತ್ತು, ಅಧಿಕಾರಿಗಳ ಕೊಠಡಿ ಬಿಟ್ಟು ಕೊಡುವ ಅವಶ್ಯ ಏನಿದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ ಹೊರಕ್ಕೆ
ನಡೆದರು.

ಇದೇ ವೇಳೆ ಶಿಬಿರ ಕಚೇರಿ ಒಳಗೆ ಜಯಮುತ್ತು ಹಾಗೂ ಲಿಂಗೇಶ್ ಕುಮಾರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಈ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಕಚೇರಿ ಮುಂಭಾಗ ಸೇರಿದ್ದ ಎರಡೂ ನಿರ್ದೇಶಕರ ಬೆಂಬಲಿಗರು ತಮ್ಮವರ ಪರವಾಗಿ ಘೋಷಣೆ ಕೂಗಿದರು. ಇಬ್ಬರು ನಿರ್ದೇಶಕರ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಹಾಜರಿದ್ದ ಡಿವೈಎಸ್ಪಿ ಓಂಪ್ರಕಾಶ್ ಮತ್ತು ತಂಡ ಪರಿಸ್ಥಿತಿ ನಿಭಾಯಿಸಿದರು.

ಅಧಿಕಾರ ಸ್ವೀಕರಿಸಿ ಹೊರಬಂದ ಲಿಂಗೇಶ್ ಕುಮಾರ್ ಅವರನ್ನು ಅವರ ಬೆಂಬಲಿಗರು ಹೂಮಾಲೆ ಹಾಕಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.