ADVERTISEMENT

‘ಶಿಸ್ತು, ಪರಿಸರ ಕಾಳಜಿ ಅಳವಡಿಸಿಕೊಳ್ಳಿ’

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 13:48 IST
Last Updated 5 ಜನವರಿ 2019, 13:48 IST
ಎನ್.ಎಸ್.ಎಸ್. ಘಟಕವನ್ನು ಸಿ.ರಾಜಶೇಖರ್ ಉದ್ಘಾಟಿಸಿದರು
ಎನ್.ಎಸ್.ಎಸ್. ಘಟಕವನ್ನು ಸಿ.ರಾಜಶೇಖರ್ ಉದ್ಘಾಟಿಸಿದರು   

ಚನ್ನಪಟ್ಟಣ: ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದಲೇ ಸ್ವಯಂ ಶಿಸ್ತು, ಪರಿಸರ ಕಾಳಜಿ, ಹಿರಿಯರ ಮಾರ್ಗದರ್ಶನವನ್ನು ರೂಢಿಸಿಕೊಳ್ಳುವುದರಿಂದ ಸಮಾಜಕ್ಕೆ ಉತ್ತಮ ಸೇವೆ ನೀಡಬಹುದು ಎಂದು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ರಾಜಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನೂತನವಾಗಿ ಆರಂಭಗೊಂಡ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌.ಎಸ್‌.ಎಸ್‌) ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಘಟಕದಲ್ಲಿ ಬಾಲಕಿಯರು ಭಾಗಹಿಸುವುದರಿಂದ ಸಮಾಜಮುಖಿಯಾದ ಚಿಂತನೆಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ADVERTISEMENT

ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸೇವಾ ಮನೋಭಾವನೆಯನ್ನು ಹುಟ್ಟುಹಾಕುವ ಪ್ರಮುಖ ಉದ್ದೇಶವನ್ನು ಹೊಂದಿರುವ ಘಟಕದ ಆರಂಭ ಮಾಡಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇಂತಹ ಘಟಕಗಳನ್ನು ಎಲ್ಲ ಪ್ರೌಢಶಾಲೆಗಳಲ್ಲೂ ಪ್ರಾರಂಭಿಸಿ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಹುಟ್ಟುಹಾಕುವ ಅವಶ್ಯಕತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲ ವೀರಭದ್ರಯ್ಯ ಮಾತನಾಡಿ, ವಿದ್ಯಾರ್ಥಿಗಳು ಯೋಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿಗತವಾದ ಅಭಿವೃದ್ಧಿಯ ಜೊತೆಗೆ ಸುತ್ತಲಿನ ತೊಂದರೆ ಅರಿತುಕೊಂಡು ಅವುಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ. ಯೋಜನೆಯ ಪ್ರಮಾಣಪತ್ರವನ್ನು ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಪ್ರಾಧಾನ್ಯತೆ ದೊರೆಯುತ್ತದೆ ಎಂದರು.

ಅಧಿಕಾರಿ ಎಸ್. ವೀರಾಜ್ ಮಾತನಾಡಿ, ನೂತನವಾಗಿ ಆರಂಭಗೊಂಡಿರುವ ಘಟಕದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಶಾಲಾ ಕೈತೋಟದ ನಿರ್ವಹಣೆ, ಶಾಲಾ ಆವರಣದ ಸ್ವಚ್ಛತೆ, ಪ್ರಾಣಿ ಪಕ್ಷಿಗಳ ವೀಕ್ಷಣೆ, ಅವುಗಳ ಪರಿಚಯ, ಅವುಗಳ ಜೀವನ ವಿಧಾನ, ಕೃಷಿ ಬಗ್ಗೆ ತಿಳಿವಳಿಕೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕೆಲ್ಲ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.

ಶಿಕ್ಷಕರಾದ ಎನ್. ಕಾಡಯ್ಯ, ಸಿ.ರೂಪ, ಪಿ. ವಸಂತಕುಮಾರ್, ಟಿ. ಲಲಿತಾ, ಸಿಬ್ಬಂದಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.