ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರತ್ಯೇಕಗೊಂಡು ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ನಗರದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಮತ್ತೆ ಒಂದಾದರು.
ಸುನೀಲ್ ಕುಮಾರ್ ಮತ್ತು ನಾಗವೇಣಿ ದಂಪತಿ ಮನಸ್ತಾಪ ಮರೆತು ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿಕೊಂಡು ಹೊಸ ಜೀವನಕ್ಕೆ ಅಡಿ ಇಟ್ಟರು.
ಐದು ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗೆ ಒಂದೂವರೆ ವರ್ಷದ ಮಗು ಇದೆ. ಆರಂಭದಲ್ಲಿ ಹೊಂದಾಣಿಕೆಯಿಂದ ಇದ್ದ ದಂಪತಿ ನಡುವೆ ಭಿನ್ನಾಭಿಪ್ರಾಯ ಮತ್ತು ಕೌಟುಂಬಿಕ ಕಲಹ ಶುರುವಾಗಿತ್ತು. ನಂತರ, ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದರು.
ಅದಾಲತ್‌ನಲ್ಲಿ ದಂಪತಿ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ವಿ. ರೇಣುಕ ಅವರು ಒಣ ಪ್ರತಿಷ್ಠೆ ಮತ್ತು ಭಿನ್ನಾಭಿಪ್ರಾಯ ಬದಿಗಿಟ್ಟು ಕೂಡಿ ಬಾಳುವಂತೆ ತಿಳಿ ಹೇಳಿದರು.
ನ್ಯಾಯಾಧೀಶರ ಮಾತಿಗೆ ಒಪ್ಪಿಕೊಂಡ ದಂಪತಿ ತಮ್ಮ ವಕೀಲರು ಹಾಗೂ ಕೋರ್ಟ್ ಸಿಬ್ಬಂದಿ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಿಸಿಕೊಂಡರು. ಕೊನೆಯವರೆಗೂ ಒಂದಾಗಿ ಬಾಳುವುದಾಗಿ ನ್ಯಾಯಾಧೀಶರಿಗೆ ಭರವಸೆ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಸವಿತ ಪಿ.ಆರ್ ಹಾಗೂ ಇತರರು ಈ ಕ್ಷಣಗಳಿಗೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.