ADVERTISEMENT

ರಾಮನಗರದ ಗ್ರಾಮಗಳಿಗೆ ₹ 1,800 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 9:51 IST
Last Updated 20 ಫೆಬ್ರುವರಿ 2021, 9:51 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಮನಗರ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ₹ 1,800 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕುಡಿಯುವ ನೀರಿನ ಸೌಲಭ್ಯವಿಲ್ಲದ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಸೋಮವಾರದ ಒಳಗೆ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಜಿಲ್ಲೆಗೆ ಕುಡಿಯುವ ನೀರಿನ ಪೂರೈಕೆಗಾಗಿ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಬೆಂಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ನದಿ ಮೂಲಗಳಿಂದ ನೀರು ತಂದು ಗ್ರಾಮಗಳಿಗೆ ಪೂರೈಸುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

‘ಜಿಲ್ಲೆಗೆ ಕಾವೇರಿ ನದಿಯಿಂದ ನೀರು ತರುವ ಯೋಜನೆ ಪ್ರಗತಿಯಲ್ಲಿದೆ. ಅದೇ ರೀತಿ ಎತ್ತಿಹೊಳೆ ಯೋಜನೆಯಿಂದಲೂ ನೀರು ಲಭ್ಯವಾಗಲಿದೆ. ಆ ಯೋಜನೆಗಳು ಮುಗಿಯುವ ವೇಳೆಗೆ ಜಿಲ್ಲೆಯಲ್ಲಿ ಪ್ರತಿ ಹಳ್ಳಿಗೂ ನೀರು ಸರಬರಾಜು ಮಾಡುವ ಪೈಪ್‌ಲೇನ್ ಜಾಲ ರೂಪಿಸಿರಬೇಕು. ಹೀಗಾಗಿ ಎಲ್ಲ ಕಾಮಗಾರಿಗಳನ್ನು ವೇಗವಾಗಿ ಮುಗಿಸಬೇಕು. ಭೂ ಸ್ವಾಧೀನ, ಪರಿಹಾರ ನೀಡಿಕೆ ಕೆಲಸಗಳು ಬಾಕಿ ಇದ್ದರೆ ಶೀಘ್ರವೇ ಮುಗಿಸಬೇಕು’ ಎಂದು ಸೂಚಿಸಿಡಿದರು.

ADVERTISEMENT

ಮಾಗಡಿ ಕ್ಷೇತ್ರಕ್ಕೆ 0.21 ಟಿಎಂಸಿ: ‘ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಮಾಗಡಿ ವಿಧಾನಸಭೆ ಕ್ಷೇತ್ರಕ್ಕೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಮೂಲಕ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಆ ಬಗ್ಗೆಯೂ ಉಪ ಮುಖ್ಯಮಂತ್ರಿ ಉನ್ನತ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಮಂಜುನಾಥ್‌ ಜೊತೆ ಚರ್ಚೆ ನಡೆಸಿದರು.

2011ರ ಜನಗಣತಿ ಪ್ರಕಾರ ಮಾಗಡಿ ತಾಲ್ಲೂಕಿನಲ್ಲಿ 1.75 ಲಕ್ಷ ಜನಸಂಖ್ಯೆ ಇತ್ತು. ಈಗ 2 ಲಕ್ಷ ದಾಟಿರುವ ಸಾಧ್ಯತೆ ಇದೆ. 2055ಕ್ಕೆ ಎಷ್ಟು ಜನಸಂಖ್ಯೆ ಆಗುತ್ತದೋ ಅಷ್ಟನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀರಾವರಿ ಯೋಜನೆಯನ್ನು ರೂಪಿಸಬೇಕು. ತಾಲ್ಲೂಕಿಗೆ ಮಂಚನಬೆಲೆ ಜಲಾಶಯದಿಂದ 0.91 ಟಿಎಂಸಿ, ವೈ.ಜಿ.ಗುಡ್ಡದಿಂದ 0.02 ಟಿಎಂಸಿ ನೀರು ಲಭ್ಯವಾಗಲಿದೆ. ಒಟ್ಟು 81 ಗ್ರಾಮಗಳಿಗೆ 0.21 ಟಿಎಂಸಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಯಾವ ಕಾರಣಕ್ಕೂ ಕಾಮಗಾರಿಗಳು ತಡವಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯರಾಮ್‌, ಗ್ರಾಮೀಣ ನೀರು ಸರಬರಾಜು ಇಲಾಖೆಯ ಮುಖ್ಯ ಎಂಜಿನಿಯರ್‌ ಒಳಿಯಾಚೆ, ಮುಖ್ಯ ಎಂಜಿನಿಯರ್ ಮಹೇಶ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.