ADVERTISEMENT

ಮಾಗಡಿ: ಮುಂಗಾರು ಬೆಳೆ ಸಮೀಕ್ಷೆಗೆ ಚಾಲನೆ

ಜಮೀನಿನಲ್ಲಿ ಬೆಳೆದ ಫಸಲು ದಾಖಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:02 IST
Last Updated 29 ಜುಲೈ 2021, 5:02 IST
ಮಾಗಡಿಯಲ್ಲಿ ಮುಂಗಾರು ಬೆಳೆ ಸಮೀಕ್ಷೆ ರಥಕ್ಕೆ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್‌ ಚಾಲನೆ ನೀಡಿದರು
ಮಾಗಡಿಯಲ್ಲಿ ಮುಂಗಾರು ಬೆಳೆ ಸಮೀಕ್ಷೆ ರಥಕ್ಕೆ ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್‌ ಚಾಲನೆ ನೀಡಿದರು   

ಮಾಗಡಿ: ‘ತಾಲ್ಲೂಕಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು ಮುಂಗಾರು ಸಮೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಸಿ. ಮಂಜುನಾಥ್‌ ತಿಳಿಸಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಮುಂಗಾರು ಬೆಳೆ ಸಮೀಕ್ಷೆ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂಗಾರು ಮಳೆ ರೈತರ ಸಮೀಕ್ಷೆ 2021–22 ಎಂಬ ಹೆಸರಿನ ಮೊಬೈಲ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ ಎಂದರು.

ADVERTISEMENT

ಮೊಬೈಲ್‌ ಆ್ಯಪ್‌ ಬಳಕೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿಕೊಡಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿಯವರನ್ನು ನೇಮಿಸಲಾಗಿದೆ. ಬೆಳೆ ಸಮೀಕ್ಷೆಯಲ್ಲಿ ಎಲ್ಲಾ ರೈತರು ಭಾಗವಹಿಸಿ ಸರ್ಕಾರದಿಂದ ಕೊಡಮಾಡಿರುವ ಸವಲತ್ತು ಬಳಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ಬಿ.ಜಿ. ಶ್ರೀನಿವಾಸಪ್ರಸಾದ್‌ ಮಾತನಾಡಿ, ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಮಾಹಿತಿ ನೋಂದಾಯಿಸಿಕೊಂಡ ರೈತರು ಮುಂದಿನ ದಿನಗಳಲ್ಲಿ ಪ್ರವಾಹ, ಬರಗಾಲ ಬಂದಲ್ಲಿ ನಷ್ಟ ಪರಿಹಾರ ಪಡೆಯಬಹುದು ಎಂದುಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನರಸಿಂಹಯ್ಯ ಮಾತನಾಡಿ, ರೈತರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್‌ಗಳನ್ನು ಸಹ ತಮ್ಮ ಮೊಬೈಲ್‌ ಆ್ಯಪ್‌ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಟೇಲ್‌ ಹನುಮಂತಯ್ಯ, ರೈತ ಯುವ ಘಟಕದ ಅಧ್ಯಕ್ಷ ರವಿಕುಮಾರ್, ರೈತ ಮುಖಂಡ ಕೃಷ್ಣಪ್ಪ, ಗೌರವಾಧ್ಯಕ್ಷ ರಂಗಸ್ವಾಮಯ್ಯ, ಲಕ್ಕೇನಹಳ್ಳಿ ಗ್ರಾ.ಪಂ. ಸದಸ್ಯ ನಾರಾಯಣ್‌, ಕೃಷಿ ಅಧಿಕಾರಿಗಳಾದ ಮಹೇಶ್‌, ಶಿವಾನಂದ್‌, ಸುಂದರೇಶ್‌, ನೀಲಕಂಠಯ್ಯ, ಅಶೋಕ್‌ಕುಮಾರ್‌, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್‌ ಸಿ., ಸಹಾಯಕ ತೋಟಗಾರಿಕೆ ಅಧಿಕಾರಿ ಮಹಮದ್‌ ನಜೀಮ್‌, ಗುಡೇಮಾರನಹಳ್ಳಿ ಹಿಮಾಕರ, ಕುಂಚಿಟಿಗರ ಸಂಘದ ಮುಖಂಡ ಜಯಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.