ADVERTISEMENT

ಸಂವಿಧಾನದ ಅಳಿವು–ಉಳಿವಿನ ಚುನಾವಣೆ: ಇಂದೂಧರ

ಬಿಜೆಪಿ ದುರಾಡಳಿತ ಅಂತ್ಯಗೊಳಿಸಲು ಹೋರಾಟ: ಇಂದೂಧರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:37 IST
Last Updated 16 ಏಪ್ರಿಲ್ 2024, 5:37 IST
ರಾಮನಗರದ ಚೈತನ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ಅವರು ಕರಪತ್ರ ಬಿಡುಗಡೆ ಮಾಡಿದರು. ಸಮಿತಿಯ ಗುರುಪ್ರಸಾದ್ ಕೆರಗೋಡು, ವಿ. ನಾಗರಾಜ್, ಶಿವಶಂಕರ್, ಸೋಮಶೇಖರ್, ಗುಡ್ಡೆ ವೆಂಕಟೇಶ್, ವಿನಯ್ ಹಾಗೂ ಪುನೀತ್ ರಾಜ್ ಇದ್ದಾರೆ
ರಾಮನಗರದ ಚೈತನ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ಅವರು ಕರಪತ್ರ ಬಿಡುಗಡೆ ಮಾಡಿದರು. ಸಮಿತಿಯ ಗುರುಪ್ರಸಾದ್ ಕೆರಗೋಡು, ವಿ. ನಾಗರಾಜ್, ಶಿವಶಂಕರ್, ಸೋಮಶೇಖರ್, ಗುಡ್ಡೆ ವೆಂಕಟೇಶ್, ವಿನಯ್ ಹಾಗೂ ಪುನೀತ್ ರಾಜ್ ಇದ್ದಾರೆ   

ರಾಮನಗರ: ‘ಈ ಸಲದ ಲೋಕಸಭಾ ಚುನಾವಣೆಯು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಅಳಿವು–ಉಳಿವಿನ ಪ್ರಶ್ನೆಯ ಚುನಾವಣೆಯಾಗಿದೆ. ಕಳೆದ ಹತ್ತುಗಳ ಬಿಜೆಪಿಯ ದುರಾಡಳಿತವನ್ನು ಪ್ರಜ್ಞಾವಂತ ಮತದಾರರು ಅಂತ್ಯಗೊಳಿಸುವ ಕಾಲ ಸನ್ನಿಹಿತವಾಗಿದೆ’ ಎಂದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ರಾಜ್ಯ ಸಂಚಾಲಕ ಇಂದೂಧರ ಹೊನ್ನಾಪುರ ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶ ಹಿಮ್ಮುಖವಾಗಿ ಚಲಿಸುತ್ತಿದೆ. ಜನರಿಂದ ಮನಬಂದಂತೆ ತೆರಿಗೆ ವಸೂಲಿ ಮಾಡುತ್ತಿರುವ ಮೋದಿ ಸರ್ಕಾರ, ತೆರಿಗೆ ಭಯೋತ್ಪಾದನೆ ನಡೆಸುತ್ತಾ, ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದೆ. ಈ ಕುರಿತು, ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಮಿತಿ ಮಾಡುತ್ತಿದೆ’ ಎಂದು ನಗರದ ಚೈತನ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂವಿಧಾನವೆಂಬ ಆತ್ಮಕ್ಕೆ ಮೋದಿ ಅವರು ಗುಂಡಿಕ್ಕುವ ಕೆಲಸ ಮಾಡಿದ್ದಾರೆ. ಹತ್ತು ವರ್ಷಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ತೀವ್ರ ಧಕ್ಕೆಯಾಗಿದೆ. ದನಿ ಇಲ್ಲದ ಶೋಷಿತ ಸಮುದಾಯಗಳು, ಬಡವರು ಹಾಗೂ ಕಾರ್ಮಿಕರು ಸ್ಥಿತಿ ಶೋಚನೀಯವಾಗಿದೆ. ತಲಾ ಆದಾಯ ಕುಸಿತವಾಗಿದ್ದು, ದೌರ್ಜನ್ಯ ಹೆಚ್ಚುತ್ತಿದೆ. ಕೋಮು ಸೌಹಾರ್ದ ಅಳಿಸಿ ಕೋಮು ಕಲಹ ಸೃಷ್ಟಿಸಿ ರಾಜಕಾರಣ ಮಾಡುವ ತಂತ್ರವನ್ನು ಬಿಜೆಪಿ ವ್ಯವಸ್ಥಿತವಾಗಿ ನಡೆಸುತ್ತಿದೆ’ ಎಂದರು.

ADVERTISEMENT

‘ಹತ್ತು ವರ್ಷಗಳಲ್ಲಿ ಖಾಸಗೀಕರಣವು ತೀವ್ರ ವೇಗ ಪಡೆದಿದೆ. ಕೇಂದ್ರ ಸರ್ಕಾರದ ಸ್ವಾಮ್ಯದ ಉದ್ಯಮಗಳು ಖಾಸಗಿ ತೆಕ್ಕೆಗೆ ಜಾರಿವೆ. ನೌಕಾ ನೆಲೆಗಳು, ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆ ಹಾಗೂ ದೊಡ್ಡ ಗುತ್ತಿಗೆಗಳನ್ನು ಮೋದಿ ಮಿತ್ರರಿಗೆ ಕೊಡಲಾಗಿದೆ. ಮೋದಿ ಅವಧಿಯಲ್ಲಿ ಅವರ ಪರಿವಾರ ಮಾತ್ರ ಉದ್ಧಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ‘ಅಧಿಕಾರಕ್ಕೆ ಬಂದರೆ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣ, ಬೆಲೆ ಏರಿಕೆಗೆ ತಡೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದ ಬಿಜೆಪಿ, ಅಧಿಕಾರ ಹಿಡಿದ ಬಳಿಕ ತನ್ನ ಭರವಸೆಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಬಡತನ ಹೆಚ್ಚಾಗಿದೆ, ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ, ನಿರುದ್ಯೋಗ ಮಿತಿ ಮೀರಿದೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಉದ್ಯೋಗಾವಕಾಶಗಳು ಕಡಿಮೆಯಾಗಿವೆ’ ಎಂದು ಗಮನ ಸೆಳೆದರು.

‘ಬಿಜೆಪಿ ಸಂಸದ ಅನಂತಕುಮಾರ್ ಸಂವಿಧಾನ ಬದಲಿಸುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದರೂ, ಪ್ರಧಾನಿ ಅದನ್ನು ಖಂಡಿಸದೆ ಮೌನ ಸಮ್ಮತಿ ನೀಡಿದ್ದಾರೆ. ಇದೇ ರೀತಿ ರಾಷ್ಟ್ರಮಟ್ಟದಲ್ಲಿ ಸಂವಿಧಾನದ ವಿರುದ್ಧ ಹೇಳಿಕೆಗಳು ಬಿಜೆಪಿ ನಾಯಕರಿಂದ ಕೇಳಿ ಬರುತ್ತಲೇ ಇವೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶದಲ್ಲಿ ಸಂವಿಧಾನದ ಬದಲು ಮನುಸ್ಮೃತಿಯ ಆಡಳಿತ ಬರಲಿದೆ. ಹಾಗಾಗಿ, ಮತದಾರರು ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿ ಹೊರತಂದಿರುವ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಮುಖಂಡರಾದ ಶಿವಶಂಕರ್, ಸೋಮಶೇಖರ್, ಗುಡ್ಡೆ ವೆಂಕಟೇಶ್, ವಿನಯ್ ಹಾಗೂ ಪುನೀತ್ ರಾಜ್ ಇದ್ದರು.

‘ತುರ್ತು ಪರಿಸ್ಥಿತಿ ಮೀರಿದ ಸ್ಥಿತಿ’

‘ಹಿಂದೆ ಕಾಂಗ್ರೆಸ್ ಸರ್ಕಾರವು ಅಧಿಕೃತವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅದರ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗಿ ದೊಡ್ಡ ಮಟ್ಟದ ಹೋರಾಟಗಳು ನಡೆದು ಹಲವರು ಜೈಲು ಸೇರಿದ್ದರು. ಇದೀಗ ಬಿಜೆಪಿ ಅವಧಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಹಿಂದಿನ ತುರ್ತು ಪರಿಸ್ಥಿತಿಗಿಂತಲೂ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ. ಸತ್ಯ ಹೇಳುವ ಹೋರಾಟಗಾರರು ಸಾಹಿತಿಗಳು ಹಾಗೂ ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ಮೋದಿ ಪ್ರಭುತ್ವ ದಾಳಿ ನಡೆಸುತ್ತಿದೆ. ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಕಳಿಸುತ್ತಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷವೇ ಇರಬಾರದೆಂದು ಬಯಸುವ ಬಿಜೆಪಿಯು ಸಮಾಜದಲ್ಲೂ ವಿರೋಧದ ದನಿಗಳನ್ನು ವ್ಯವಸ್ಥಿತವಾಗಿ ಅಡಗಿಸುತ್ತಾ ಬರುತ್ತಿದೆ’ ಎಂದು ಸಮಿತಿಯ ವಿ. ನಾಗರಾಜ್ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.