ADVERTISEMENT

ಇ–ಖಾತಾ: ರಾಮನಗರ ಜಿಲ್ಲೆಯಲ್ಲಿ ಶೇ 43ರಷ್ಟು ಪ್ರಗತಿ

ಓದೇಶ ಸಕಲೇಶಪುರ
Published 21 ಆಗಸ್ಟ್ 2025, 2:24 IST
Last Updated 21 ಆಗಸ್ಟ್ 2025, 2:24 IST
ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನ ಆವರಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಮನೆ ಮನೆಗೆ ಇ-ಖಾತೆ’ ಅಭಿಯಾನದಲ್ಲಿ ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಲಾಗಿತ್ತು (ಸಂಗ್ರಹ ಚಿತ್ರ)
ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನ ಆವರಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಮನೆ ಮನೆಗೆ ಇ-ಖಾತೆ’ ಅಭಿಯಾನದಲ್ಲಿ ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಲಾಗಿತ್ತು (ಸಂಗ್ರಹ ಚಿತ್ರ)   

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ 6 ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆದಿರುವ ಎ–ಖಾತಾ ಮತ್ತು ಬಿ–ಖಾತಾ ಅಭಿಯಾನದಡಿ ಇದುವರೆಗೆ 57,915 ಖಾತಾಗಳನ್ನು ವಿತರಿಸಲಾಗಿದೆ. ಈ ಪೈಕಿ 49,190 ಎ–ಖಾತಾ ಹಾಗೂ 8,725 ಬಿ–ಖಾತಾ ಇದ್ದು, ಜಿಲ್ಲೆಯು ಶೇ 43ರಷ್ಟು ಪ್ರಗತಿ ಸಾಧಿಸಿದೆ.

ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿ 3 ನಗರಸಭೆ, ಮಾಗಡಿ ಮತ್ತು ಬಿಡದಿ ಸೇರಿ 2 ಪುರಸಭೆ ಹಾಗೂ ಹಾರೋಹಳ್ಳಿಯಲ್ಲಿ ಒಂದು ಪಟ್ಟಣ ಪಂಚಾಯಿತಿ ಇದೆ. ಈ ಪೈಕಿ, ಶೇ 47ರಷ್ಟು ಪ್ರಗತಿ ಸಾಧಿಸಿರುವ ಹಾರೋಹಳ್ಳಿ ಪಟ್ಟಣ ಪಂಚಾಯಿತಿಯು ಇ–ಖಾತಾ ವಿತರಣೆಯಲ್ಲಿ ಮುಂದಿದೆ. ಶೇ 38 ಪ್ರಗತಿ ಸಾಧಿಸಿರುವ ಮಾಗಡಿ ಪುರಸಭೆಯು ಹಿಂದಿದೆ.

ಎರಡನೇ ಸ್ಥಾನದಲ್ಲಿರುವ ರಾಮನಗರ ನಗರಸಭೆಯು ಶೇ 45ರಷ್ಟು ಪ್ರಗತಿ ಸಾಧಿಸಿದೆ. ಇಲ್ಲಿ 12,398 ಎ–ಖಾತಾ ಹಾಗೂ 2,090 ಬಿ–ಖಾತಾ ಸೇರಿದಂತೆ ಒಟ್ಟು 14,488 ಖಾತಾಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಬಿಡದಿ ಪುರಸಭೆ ಮತ್ತು ಕನಕಪುರ ನಗರಸಭೆ ತಲಾ ಶೇ 44 ಹಾಗೂ ಚನ್ನಪಟ್ಟಣ ಶೇ 39ರಷ್ಟು ಪ್ರಗತಿ ಸಾಧಿಸಿವೆ.

ADVERTISEMENT

ಡಿಜಿಟಲ್ ದಾಖಲೆ:

ಇ-ಖಾತಾ ಎಂಬುದು ಆಸ್ತಿಯ ಡಿಜಿಟಲ್ ದಾಖಲೆಯಾಗಿದೆ. ಇದು ಆಸ್ತಿ ಮಾಲೀಕತ್ವ, ತೆರಿಗೆ ಪಾವತಿ ಮತ್ತು ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಕರ್ನಾಟಕ ಸರ್ಕಾರ ಕಡ್ಡಾಯಗೊಳಿಸಿ, ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಹೆಜ್ಜೆ ಇಟ್ಟಿದೆ. ಇ-ಖಾತಾ ಆಸ್ತಿ ನೋಂದಣಿ, ತೆರಿಗೆ ಪಾವತಿ ಮತ್ತು ಆಸ್ತಿ ದಾಖಲೆಗಳ ನಿರ್ವಹಣೆಯನ್ನು ಸುಲಭ ಮತ್ತು ಪಾರದರ್ಶಕವಾಗಿಸುತ್ತದೆ.

ಸಾಂಪ್ರದಾಯಿಕ ಖಾತಾ ಪ್ರಮಾಣಪತ್ರದ ಡಿಜಿಟಲ್ ಆವೃತ್ತಿಯಾಗಿರುವ ಇ–ಖಾತಾವು ಆಸ್ತಿ ಮಾಲೀಕತ್ವ, ಆಸ್ತಿ ಗಾತ್ರ ಮತ್ತು ತೆರಿಗೆ ಬಾಧ್ಯತೆಗಳನ್ನು ಒಳಗೊಂಡಂತೆ ಆಸ್ತಿಯ ವಿವರಗಳನ್ನು ದಾಖಲಿಸುತ್ತದೆ. ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಇ–ಖಾತಾ ವಿತರಿಸಲಾಗುತ್ತದೆ.

ಎ–ಖಾತಾ:

ಕಾನೂನುಬದ್ಧವಾಗಿರುವ ಆಸ್ತಿ ಎ–ಖಾತಾ ವ್ಯಾಪ್ತಿಗೆ ಬರುತ್ತದೆಯಲ್ಲದೆ, ಎಲ್ಲಾ ನಿಯಮಗಳನ್ನು ಪಾಲಿಸಿರುವುದನ್ನು ಸೂಚಿಸುತ್ತದೆ. ಮಾಲೀಕರು ಆಸ್ತಿ ತೆರಿಗೆಯನ್ನು ಪಾವತಿಸುವ ಜೊತೆಗೆ ಮತ್ತು ಆಸ್ತಿ ಅಥವಾ ಕಟ್ಟಡ ನಿರ್ಮಾಣವು ನಿಯಮಗಳಿಗೆ ಅನುಗುಣವಾಗಿದೆ ಎಂಬುದನ್ನು ಪ್ರಮಾಣೀಕರಿಸುತ್ತದೆ.

ಎ-ಖಾತಾ ಹೊಂದಿರುವ ಆಸ್ತಿ ಮಾಲೀಕರು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸುಲಭವಾಗಿ ಸಾಲ ಪಡೆಯಬಹುದು. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿಗಳನ್ನು ಪಡೆಯಲು ಸುಲಭವಾಗುತ್ತದೆ. ನೀರು, ವಿದ್ಯುತ್, ಒಳಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಸುಲಭವಾಗಿ ಪಡೆಯಬಹುದು. ಆಸ್ತಿ ಮಾರಾಟ ಅಥವಾ ವರ್ಗಾವಣೆಯು ಸರಾಗವಾಗಿ ನಡೆಯುತ್ತದೆ.

ಬಿ–ಖಾತಾ:

ಕಾನೂನುಬದ್ಧವಾಗಿರದ ಆಸ್ತಿ (ಕಟ್ಟಡ, ಮನೆ, ವಸತಿ ಸಮುಚ್ಛಯ) ಬಿ–ಖಾತಾ ವ್ಯಾಪ್ತಿಗೆ ಬರುತ್ತದೆ. ನಿಯಮಗಳ ಉಲ್ಲಂಘನೆ ಸೂಚಿಸುವ ಈ ಖಾತಾದಡಿ ಸರ್ಕಾರದಿಂದ ಪೂರ್ಣ ಪ್ರಮಾಣವಲ್ಲದ ಅರೆ ಅನುಮತಿ ಪಡೆದುಕೊಂಡಿರುತ್ತದೆ. ಅನಧಿಕೃತ ವಿನ್ಯಾಸ, ಅಪೂರ್ಣ ಕಟ್ಟಡ, ನಿಯಮಬಾಹಿರ ನಿರ್ಮಾಣಕ್ಕೆ ಬಿ–ಖಾತಾ ನೀಡಲಾಗುತ್ತದೆ.

ಈ ಖಾತೆ ಹೊಂದಿರುವವರಿಗೆ ಸರ್ಕಾರಿ ಪರವಾನಗಿ ಸಿಗುವುದಿಲ್ಲ. ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಿಗದು. ಆಸ್ತಿ ಮಾರಾಟ ಅಥವಾ ವರ್ಗಾವಣೆ ಮಾಡುವುದು ಕಷ್ಟವಾಗುತ್ತದೆ. 2014ರಲ್ಲಿ ಹೈಕೋರ್ಟ್ ಬಿ–ಖಾತಾಗಳನ್ನು ಅಮಾನ್ಯ ಎಂದು ಹೇಳಿರುವುದರಿಂದ, ಬಿ–ಖಾತಾ ಹೊಂದಿರುವವರು ಆಸ್ತಿ ವಿಚಾರದಲ್ಲಿ ಕಾನೂನು ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಪರಿಹರಿಸುವ ಸಲುವಾಗಿ ರಾಜ್ಯ ಸರ್ಕಾರ ಅಭಿಯಾನ ಆರಂಭಿಸಿತ್ತು.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎ–ಖಾತಾ ಮತ್ತು ಬಿ–ಖಾತಾ ಒಳಗೊಂಡಂತೆ ಒಟ್ಟು 135008 ಆಸ್ತಿಗಳಿವೆ. ಈ ಪೈಕಿ ಎರಡೂ ಸೇರಿ 57915 ಖಾತಾಗಳನ್ನು ವಿತರಣೆ ಮಾಡಲಾಗಿದ್ದು ಶೇ 43ರಷ್ಟು ಪ್ರಗತಿ ಸಾಧಿಸಲಾಗಿದೆ
– ಶೇಖರ್ ಯೋಜನಾ ನಿರ್ದೇಶಕ ನಗರಾಭಿವೃದ್ಧಿ ಕೋಶ ಬೆಂಗಳೂರು ದಕ್ಷಿಣ ಜಿಲ್ಲೆ
ಅಭಿಯಾನದಡಿ 13068 ಖಾತಾ ವಿತರಣೆ
ಕರ್ನಾಟಕ ಪೌರಾಡಳಿತ ನಿಯಮಗಳು– 1977 ಹಾಗೂ ಕರ್ನಾಟಕ ಪೌರಾಡಳಿತ ಕಾಯ್ದೆ– 1976ರ ಕೆಲವು ನಿಯಮಾವಳಿಗೆ ತಿದ್ದುಪಡಿಗಳನ್ನು ತಂದಿದ್ದ ರಾಜ್ಯ ಸರ್ಕಾರ ಅಧಿಕೃತವಲ್ಲದ ಆಸ್ತಿಗಳನ್ನು ಅಧಿಕೃತ ಎಂದು ಘೋಷಿಸುವ ನಿಟ್ಟಿನಲ್ಲಿ ಫೆ. 18ರಿಂದ ರಾಜ್ಯದಾದ್ಯಂತ ಬಿ–ಖಾತೆ (ನಮೂನೆ 3ಎ) ಅಭಿಯಾನ ಆರಂಭಿಸಿತ್ತು. ಅದರಡಿ ಆ. 10ರವರೆಗೆ ನಡೆದಿದ್ದ ಅಭಿಯಾನದಲ್ಲಿ ಎ–ಖಾತಾ ಮತ್ತು ಬಿ–ಖಾತಾ ಒಳಗೊಂಡಂತೆ ಜಿಲ್ಲೆಯಲ್ಲಿ 13068 ಖಾತಾಗಳನ್ನು ವಿತರಣೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.