ADVERTISEMENT

ಸ್ಥಳದಲ್ಲೇ ಅರ್ಜಿದಾರರ ಕೈ ಸೇರಿದ ಇ–ಖಾತೆ

ರಾಮನಗರ ನಗರಸಭೆಯ ‘ಮನೆ ಮನೆಗೆ ಇ-ಖಾತೆ ಅಭಿಯಾನ’ಕ್ಕೆ ಜನರ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 18:48 IST
Last Updated 24 ಜುಲೈ 2025, 18:48 IST
ರಾಮನಗರ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಇ-ಖಾತೆ ಸೌಲಭ್ಯ’ ಅಭಿಯಾನದಲ್ಲಿ ಅರ್ಜಿ ಸಲ್ಲಿಸಿದವರಿಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ  ಶಶಿ ಮತ್ತು ಪೌರಾಯುಕ್ತ ಡಾ. ಜಯಣ್ಣ ಸ್ಥಳದಲ್ಲೇ ಇ–ಖಾತೆಗಳನ್ನು ವಿತರಿಸಿದರು. ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ
ರಾಮನಗರ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಇ-ಖಾತೆ ಸೌಲಭ್ಯ’ ಅಭಿಯಾನದಲ್ಲಿ ಅರ್ಜಿ ಸಲ್ಲಿಸಿದವರಿಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ  ಶಶಿ ಮತ್ತು ಪೌರಾಯುಕ್ತ ಡಾ. ಜಯಣ್ಣ ಸ್ಥಳದಲ್ಲೇ ಇ–ಖಾತೆಗಳನ್ನು ವಿತರಿಸಿದರು. ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ   

ರಾಮನಗರ: ಸ್ಥಳೀಯ ಸಂಸ್ಥೆಗಳಾದ ನಗರಸಭೆ ಮತ್ತು ಪುರಸಭೆಯಲ್ಲಿ ಇ–ಖಾತೆ ಪಡೆಯುವುದೇ ಸವಾಲು. ಅದರಲ್ಲೂ ಸಕಾಲದಲ್ಲಿ ಸಿಗುವುದು ದೊಡ್ಡ ಮಾತು. ಆದರೆ, ರಾಮನಗರ ನಗರಸಭೆ ಅದಕ್ಕೆ ವ್ಯತಿರಿಕ್ತವಾಗಿದೆ. ಇ–ಖಾತೆ ಅರ್ಜಿಗಳ ವಿಲೇವಾರಿಗೆ ವಿಶೇಷ ಒತ್ತು ನೀಡಿ, ಅದಕ್ಕಾಗಿ ಅಭಿಯಾನ ಹಮ್ಮಿಕೊಂಡು ತ್ವರಿತವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.

ವರ್ಷದಿಂದ ತಿಂಗಳವರೆಗೆ ಬಾಕಿ ಉಳಿದಿದ್ದ ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಿರುವ ನಗರಸಭೆಯು, ಅರ್ಜಿದಾರರನ್ನು ಕಚೇರಿಗೆ ಕರೆದು ಇ–ಖಾತೆ ವಿತರಿಸುವ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದೆ. ಇದೀಗ ‘ನಿಮ್ಮ ಆಸ್ತಿ ನಿಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ‘ಮನೆಯಂಗಳದಲ್ಲಿ ಇ-ಖಾತೆ ಸೌಲಭ್ಯ’ ಅಭಿಯಾನ ಹಮ್ಮಿಕೊಂಡಿದೆ.

ಮೊದಲಿಗೆ 1ನೇ ವಾರ್ಡ್‌ ಚಾಮುಂಡಿಪುರ ಮತ್ತು 2ನೇ ವಾರ್ಡ್‌ ವಿನಾಯಕನಗರಕ್ಕೆ ಸಂಬಂಧಿಸಿದಂತೆ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅಭಿಯಾನ ನಡೆಯಿತು. ಪೌರಾಯುಕ್ತ ಡಾ. ಜಯಣ್ಣ ಸೇರಿದಂತೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿಗಳು ಶಾಲೆ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಬೀಡುಬಿಟ್ಟು ಅಭಿಯಾನ ನಡೆಸಿದರು.

ADVERTISEMENT

ದಿನವಿಡೀ ನಡೆದ ಅಭಿಯಾನದಲ್ಲಿ 50ಕ್ಕೂ ಹೆಚ್ಚು ಅರ್ಜಿಗಳು ಸ್ಥಳದಲ್ಲೇ ಆನ್‌ಲೈನ್‌ನಲ್ಲಿ ಸ್ವೀಕರಿಸಲಾಯಿತು. ಈ ಪೈಕಿ, ಕ್ರಮಬದ್ಧವಾಗಿದ್ದ 25ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಿ ಅರ್ಜಿದಾರರಿಗೆ ಇ–ಖಾತೆಗಳನ್ನು ಅಧ್ಯಕ್ಷ ಶೇಷಾದ್ರಿ ಮತ್ತು ಪೌರಾಯುಕ್ತರು ವಿತರಿಸಿದರು. ಅಭಿಯಾನಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ವೇಳೆ ಮಾತನಾಡಿದ ಶೇಷಾದ್ರಿ, ‘ಆರು ತಿಂಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಇ-ಖಾತೆಗಳನ್ನು ವಿತರಿಸಲಾಗಿದೆ. ಇದರಿಂದಾಗಿ ತಿಂಗಳಿಂದ ವರ್ಷದವರೆಗೆ ಇ–ಖಾತೆಗಾಗಿ ನಗರಸಭೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲಾಗಿದೆ. ಇನ್ನೂ ಇ–ಖಾತೆ ಮತ್ತು ಬಿ– ಖಾತೆ ಮಾಡಿಸಿಕೊಳ್ಳದವರು ತಮ್ಮ ವಾರ್ಡ್‌ನಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಂಡು ಖಾತೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ವಿಜಯಕುಮಾರಿ, ಪವಿತ್ರಾ, ಜಯಲಕ್ಷ್ಮಮ್ಮ, ಗಿರಿಜಾ ಗುರುವೇಗೌಡ, ಮಂಜುಳಾ ವೆಂಕಟೇಶ್, ಸೋಮಶೇಖರ್ (ಮಣಿ), ಶಿವಸ್ವಾಮಿ, ಅಸ್ಮತ್‌ಉಲ್ಲಾ ಖಾನ್, ಗೋವಿಂದರಾಜು, ನಾಗಮ್ಮ, ರಮೇಶ್, ಕಂದಾಯ ಅಧಿಕಾರಿ ಕಿರಣ್, ನಿರೀಕ್ಷಕರಾದ ಆರ್. ನಾಗರಾಜು, ನಗರಸಭೆ ಮಾಜಿ ಸದಸ್ಯ ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದರು.

‘ಮನೆಯಂಗಳದಲ್ಲಿ ಇ-ಖಾತೆ ಸೌಲಭ್ಯ’ ಅಭಿಯಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಾಗಾಗಿ ಎಲ್ಲಾ ವಾರ್ಡ್‌ಗಳಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗುವುದು

ಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ

28ಕ್ಕೆ ಕಾಯಿಸೊಪ್ಪಿನ ಬೀದಿ 30ಕ್ಕೆ ಕನ್ನಿಕಾ ಮಹಲ್‌ನಲ್ಲಿ ಅಭಿಯಾನ

‘ಜುಲೈ 28ರಂದು 3 4 ಹಾಗೂ 5ನೇ ವಾರ್ಡ್‌ನ ಗಾಂಧಿನಗರ ಕಾಯಿಸೊಪ್ಪಿನ ಬಿದಿ ಮೇದಾರ ಬೀದಿ ಶೆಟ್ಟಿ ಬಲಜಿಗರ ಬೀದಿ ವ್ಯಾಪ್ತಿಗೆ ಸಂಬಂಧಿಸಿದಂತೆ ಕಾಯಿಸೊಪ್ಪಿನ ಬೀದಿಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ಅಭಿಯಾನ ಜರುಗಲಿದೆ. ಜುಲೈ 30ರಂದು ವಾರ್ಡ್ ಸಂಖ್ಯೆ 6 7 8 ಹಾಗೂ 9ರ ಚಾಮುಂಡೇಶ್ವರಿ ಬಡಾವಣೆ ಅಗ್ರಹಾರ ಹಾಗೂ ಅರಳೇಪೇಟೆ ವ್ಯಾಪ್ತಿಗೆ ಸಂಬಂಧಿಸಿದಂತೆ ಕನ್ನಿಕಾ ಮಹಲ್‌ನಲ್ಲಿ ಅಭಿಯಾನ ನಡೆಯಲಿದೆ. ಜನರಿಗೆ ಜಾಗೃತಿ ಮೂಡಿಸಲು ಕರಪತ್ರ ಮುದ್ರಿಸಿ ಹಂಚಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.