ರಾಮನಗರ: ಆರ್ಥಿಕವಾಗಿ ಸದೃಢವಾಗಿರುವ ರಾಮನಗರ ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದೆ. ಇಲ್ಲಿನ ಮಕ್ಕಳ ಸದೃಢ ಶಿಕ್ಷಣಕ್ಕೆ ಅಗತ್ಯ ಇರುವ ದಾರಿ ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಹಾಗೂ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಂವಾದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿನ ಪಕ್ಕದಲ್ಲೇ ಇರುವ ಜಿಲ್ಲೆಯಾಗಿದೆ ಎಂದರು.
ಬೆಂಗಳೂರಿಗೆ ಹತ್ತಿರದಲ್ಲಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿದಿವೆ. ಆದರೆ, ಶೈಕ್ಷಣಿಕವಾಗಿ ಬಲಾಢ್ಯವಾಗಿವೆ. ರಾಮನಗರ ಇದಕ್ಕೆ ವಿರುದ್ಧವಾಗಿದೆ. ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿ ಅವಶ್ಯಕ. ಅಂದರೆ ಭಾಷೆ ಮತ್ತು ಗಣಿತ ವಿಷಯಗಳ ಬಗ್ಗೆ ಉತ್ತಮ ಜ್ಞಾನ ಇರುವುದು ಮುಖ್ಯ ಎಂದರು.
ಡಾ.ಡಿ.ಎಂನಂಜುಡಪ್ಪ ಅವರ 2002ರ ವರದಿ ಅನ್ವಯ ರಾಮನಗರ ಜಿಲ್ಲೆಯಲ್ಲಿ ಕನಕಪುರ ಮತ್ತು ಮಾಗಡಿ ಅತಿ ಹಿಂದುಳಿದ ತಾಲ್ಲೂಕುಗಳು. ಚನ್ನಪಟ್ಟಣ ಹಿಂದುಳಿದ ತಾಲ್ಲೂಕು ಆಗಿದೆ. ಸೂಚ್ಯಂಕಗಳಲ್ಲಿ ಗಮನಾರ್ಹವಾದ ಬದಲಾವಣೆ ಆಗದ ಕಾರಣ ವಾಸ್ತವ ಸ್ಥಿತಿ ಅನ್ವಯ ಅಸಮತೋಲನೆ ನಿವಾರಣೆ ಮಾಡಲು ತಳ ಮಟ್ಟದ ಸಲಹೆ ಸೂಚನೆ ಪಡೆಯಲು ಸಂವಾದ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಪಶುಪಾಲನೆ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾಧಿಕಾರಿಗಳು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಸುಧಾರಿಸುವ ಸೂಚ್ಯಂಕ ಅಭಿವೃದ್ಧಿಪಡಿಸಲು ಹಲವು ಸಲಹೆ ನೀಡುತ್ತಾ ಇಲಾಖಾವಾರು ಸಿಬ್ಬಂದಿ ಭರ್ತಿಗೆ ಕ್ರಮಕೈಗೊಳ್ಳಲು ಕೋರಿದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಡಾ.ಎಂ.ಎಚ್.ಸೂರ್ಯನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಉಪಕಾರ್ಯದರ್ಶಿ ಧನರಾಜ್, ಜಿಲ್ಲಾಮಟ್ಟದ ಅಧಿಕಾರಿಗಳು, ಚೆಂಬರ್ಸ್ ಆಫ್ ಕಾಮರ್ಸ್ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ಸಮಾಜ ಸೇವಕರು, ನೋಂದಾಯಿತ ಸಂಘ–ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.