ADVERTISEMENT

ಕಾಡಾನೆ ದಾಳಿ: ಬೆಳೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:46 IST
Last Updated 17 ಸೆಪ್ಟೆಂಬರ್ 2021, 2:46 IST
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿ ತೆಂಗಿನಮರಗಳು ಆನೆ ದಾಳಿಗೆ ಧ್ವಂಸವಾಗಿರುವುದು
ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಗ್ರಾಮದಲ್ಲಿ ತೆಂಗಿನಮರಗಳು ಆನೆ ದಾಳಿಗೆ ಧ್ವಂಸವಾಗಿರುವುದು   

ಚನ್ನಪಟ್ಟಣ: ತಾಲ್ಲೂಕಿನ ಕೆಂಗಲ್ ಗ್ರಾಮದ ರೈತರ ತೋಟಗಳಿಗೆ ಬುಧವಾರ ಲಗ್ಗೆ ಇಟ್ಟಿರುವ ಮೂರು ಕಾಡಾನೆಗಳು, ಬೆಳೆಗಳನ್ನು ಧ್ವಂಸ ಮಾಡಿವೆ.

ಬೆಂಗಳೂರು–ಮೈಸೂರು ಹೆದ್ದಾರಿಯ ಕುವೆಂಪು ಕಾಲೇಜು ಮತ್ತು ಅದರ ಪಕ್ಕದಲ್ಲಿರುವ ಅರಣ್ಯ ಇಲಾಖೆಗೆ ಸೇರಿರುವ ಕೆಂಗಲ್ ಹನುಮಂತಯ್ಯ ಥೀಮ್ ಪಾರ್ಕ್ ಬಳಿ ಮೂರು ಆನೆಗಳು ಬೀಡು ಬಿಟ್ಟು ನಂತರ ರೈತರ ತೋಟಗಳ ಮೇಲೆ ದಾಳಿ ನಡೆಸಿವೆ.

ಕೆಂಗಲ್ ಗ್ರಾಮದ ರುದ್ರಪ್ಪ ಅವರ ತೋಟಕ್ಕೆ ನುಗ್ಗಿರುವ ಆನೆಗಳು ತೆಂಗಿನ ಮರಗಳನ್ನು ಮುರಿದು, ಇತರೆ ಬೆಳೆಗಳನ್ನು ನಾಶಪಡಿಸಿವೆ. ‘ಈಗಾಗಲೇ ಆರೇಳು ಬಾರಿ ನಮ್ಮ ತೋಟಕ್ಕೆ ನುಗ್ಗಿ ಫಸಲು ಹಾಗೂ ತೆಂಗಿನ ಮರಗಳನ್ನು ಆನೆಗಳು ನಾಶಪಡಿಸಿದ್ದವು. ಈಗ ಮತ್ತೆ ತೆಂಗಿನ ಗಿಡಗಳು ಹಾಗೂ ಫಸಲನ್ನು ಹಾಳು ಮಾಡಿವೆ. ಇದುವರೆಗೂ ತಮಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ದೊರೆತಿಲ್ಲ. ಈಗ ಮತ್ತದೆ ಸಂಕಷ್ಟವನ್ನು ಗಜಪಡೆ ತಂದಿಟ್ಟಿವೆ’ ಎಂದು ರೈತ ರುದ್ರಪ್ಪ ಅಳಲು ತೋಡಿಕೊಂಡರು.

ADVERTISEMENT

ಮುದಗೆರೆ ಬಳಿ ದಾಳಿ: ತಾಲ್ಲೂಕಿನ ಮುದಗೆರೆ ಬಳಿಯ ದಬಾನ್ ಗುಂದಿ ಪ್ರದೇಶದಲ್ಲಿ ಆನೆಗಳು ದಾಳಿ ನಡೆಸಿ ಬಾಳೆತೋಟವನ್ನು ಧ್ವಂಸ ಮಾಡಿವೆ. ತಾಲ್ಲೂಕಿನ ಕೂಡ್ಲೂರು ಕೆರೆಯಲ್ಲಿ ಬೀಡುಬಿಟ್ಟಿದ್ದ ಮೂರು ಆನೆಗಳನ್ನು ಕಾಡಿಗೆ ಓಡಿಸಲಾಗಿದ್ದು, ಈ ಆನೆಗಳು ಮತ್ತೆ ಕಾಡಿನಿಂದ ಆಚೆ ಬಂದು ಈ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.

ಗ್ರಾಮದ ರೈತ ಪ್ರಶಾಂತ್ ಅವರು ಬೆಳೆದಿದ್ದ ಬಾಳೆ ತೋಟ ಧ್ವಂಸವಾಗಿದ್ದು, ಲಕ್ಷಾಂತರ ಮೌಲ್ಯದ ಬಾಳೆತೋಟ ನಾಶವಾಗಿದೆ. ಇದೇ ಆನೆಗಳು ಸಂಕಲಗೆರೆ ಗ್ರಾಮದಲ್ಲಿಯೂ ರೈತರ ಬೆಳೆಗಳ ಮೇಲೆ ದಾಳಿ ನಡೆಸಿವೆ. ಗ್ರಾಮದ ರೈತ ನಾಗೇಶ್ ಅವರು ಬೆಳೆದಿದ್ದ ಟೊಮೆಟೊ ಬೆಳೆಯನ್ನು ಧ್ವಂಸ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.