ADVERTISEMENT

ಕನಕಪುರ | ವಿದ್ಯುತ್ ಪ್ರವಹಿಸಿ ಆನೆ ಸಾವು: ಜಮೀನು ಮಾಲೀಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:53 IST
Last Updated 11 ಡಿಸೆಂಬರ್ 2025, 3:53 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಕನಕಪುರ (ರಾಮನಗರ): ತಾಲ್ಲೂಕಿನ ಸಂಗಮ ವನ್ಯಜೀವಿ ವಲಯದಲ್ಲಿರುವ ಉಯ್ಯಂಬಳ್ಳಿ ಗ್ರಾಮದ ಜಮೀನಿನಲ್ಲಿ 6 ವರ್ಷಗಳ ಹಿಂದೆ ವಿದ್ಯುತ್ ಪ್ರವಹಿಸಿ ಕಾಡಾನೆ ಮರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಜಮೀನು ಮಾಲೀಕ ಶಿವಲಿಂಗೇಗೌಡ ಎಂಬುವರಿಗೆ ₹5 ಸಾವಿರ ದಂಡ ವಿಧಿಸಿದೆ.

ಬೆಳೆ ರಕ್ಷಿಸಿಕೊಳ್ಳುವುದಕ್ಕಾಗಿ ಶಿವಲಿಂಗೇಗೌಡ ತಮ್ಮ ಜಮೀನಿನ ಸುತ್ತ ಅಳವಡಿಸಿದ್ದ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. 2019ರ ಏಪ್ರಿಲ್ 4ರಂದು ಆಹಾರ ಅರಸಿ ಜಮೀನಿಗೆ ಬಂದಿದ್ದ ಕಾಡಾನೆ ಬೇಲಿ ದಾಟುವಾಗ ವಿದ್ಯುತ್‌ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿತ್ತು.

ADVERTISEMENT

ಘಟನೆ ಕುರಿತು ಸಾತನೂರು ಠಾಣೆ ಪೊಲೀಸರು ಶಿವಲಿಂಗೇಗೌಡ ವಿರುದ್ಧ ಕರ್ನಾಟಕ ವಿದ್ಯುತ್ ಸುಧಾರಣೆ ಕಾಯ್ದೆ–1999ರಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖಾಧಿಕಾರಿ ಮುರಳಿ ವಿಚಾರಣೆ ನಡೆಸಿ ಸಾಕ್ಷ್ಯ ಸಮೇತ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯ ಅವರು, ಶಿವಲಿಂಗೇಗೌಡ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ₹5 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ವಿಶೇಷ ಅಭಿಯೋಜಕಿ ವಾಸವಿ ಅಂಗಡಿ ವಾದ ಮಂಡಿಸಿದ್ದರು.

ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಠಾಣೆಯ ಕೋರ್ಟ್ ಸಿಬ್ಬಂದಿ ಮೆಹಬೂಬ್ ಸಾಬ್ ಮುಲ್ಲಾ ಹಾಗೂ ಇತರ ಅಧಿಕಾರಿಗಳು ಶ್ರಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.