ADVERTISEMENT

ಕಿರುಕುಳ ಆರೋಪ | ಇಡಿ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ಲಿಂಗಪ್ಪ ದೂರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 6:48 IST
Last Updated 28 ಸೆಪ್ಟೆಂಬರ್ 2019, 6:48 IST
   

ರಾಮನಗರ: 'ಶಿವಕುಮಾರ್‌ ಅರನ್ನು ಇ‌.ಡಿ ಅಧಿಕಾರಿಗಳು ದೆಹಲಿಯ ಕಚೇರಿಯಲ್ಲಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಇದನ್ನು ಖಂಡಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇನೆ' ಎಂದು ವಿಧಾನ ಪರಿಷತ್ ಸದಸ್ಯ ಲಿಂಗಪ್ಪ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇ.ಡಿ.‌ ನಿರ್ದೇಶನಾಲಯದ ಮೋನಿಕಾ ಶರ್ಮಾ ಮತ್ತು ಇತರ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಸಿದ್ದೇನೆ ಎಂದರು.

ಇ.ಡಿಯನ್ನು ಕೇಂದ್ರ ಸರ್ಕಾರ ನಿಯಂತ್ರಣ ಮಾಡುತ್ತಿದೆ. ಹೀಗಾದರೆ ಕಾನೂನಿಗೆ ಬೆಲೆ ಇಲ್ಲದಂತೆ ಆಗುತ್ತದೆ. ಶಿವಕುಮಾರ್ ಕೇವಲ ಆರೋಪಿ ಅಷ್ಟೇ. ಇನ್ನೂ ಚಾರ್ಜ್ ಶೀಟ್ ಸಲ್ಲಿಕೆ ಆಗಿಲ್ಲ. ಆದರೆ ಈಗಾಗಲೇ ಅಪರಾಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಅವರಿಗೆ ಜೈಲಿನಲ್ಲಿ ಕನಿಷ್ಠ ಹಾಸಿಗೆ, ದಿಂಬು, ಮಾತ್ರೆಗಳನ್ನು ನೀಡಿಲ್ಲ. ಕುಟುಂಬದವರು, ಆಪ್ತರ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ದೂರಿದರು.

ADVERTISEMENT

ಶಿವಕುಮಾರ್ ಗೈರಿನಿಂದ ಸಾರ್ವಜನಿಕ ಕೆಲಸ- ಕಾರ್ಯಗಳಿಗೆ ಅಡ್ಡಿ ಆಗುತ್ತಿದೆ. ಅವರೊಬ್ಬ ಜವಾಬ್ದಾರಿಯುತ ಜನಪ್ರತಿ‌ನಿಧಿ. ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ ಎಂದರು.

ಶಿವಕುಮಾರ್‌ಗೆ ಸಂಪೂರ್ಣ ಬೆಂಬಲ ನೀಡಲು ಈಗಾಗಲೇ ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅವರ ಬೆಂಬಲಕ್ಕೆ ನಾವೆಲ್ಲ ನಿಲ್ಲಲಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.