ADVERTISEMENT

‘ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ’

ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 11:40 IST
Last Updated 4 ಅಕ್ಟೋಬರ್ 2018, 11:40 IST
ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಾದೇಶಿಕ ವಲಯದ ಅಧ್ಯಕ್ಷ ಬಿ. ನಿರಂಜನ್‌ ಮಾತನಾಡಿದರು
ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಾದೇಶಿಕ ವಲಯದ ಅಧ್ಯಕ್ಷ ಬಿ. ನಿರಂಜನ್‌ ಮಾತನಾಡಿದರು   

ರಾಮನಗರ: ಮನುಷ್ಯ ಸತ್ತ ಮೇಲೂ ಅಂಗಾಂಗಗಳಿಗೆ ಜೀವವಿರುತ್ತದೆ. ಅವು ಮತ್ತೊಬ್ಬರ ದೇಹಕ್ಕೆ ಜೀವ ಕೊಡುತ್ತವೆ. ಹಾಗಾಗಿ ಕಣ್ಣು ಸೇರಿದಂತೆ ದೇಹದ ಅಂಗಾಂಗಗಳನ್ನು ದಾನ ಮಾಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜೆ. ವಿಜಯನರಸಿಂಹ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಲಯನ್ಸ್‌ ಹಾಗೂ ಲಯನೆಸ್‌ ಕ್ಲಬ್‌ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಮನುಷ್ಯನ ಆರೋಗ್ಯಕ್ಕೆ ತರಕಾರಿ ಸೇವನೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಕಾಯಿ, ಸೊಪ್ಪು ತರಕಾರಿಗಳನ್ನು ಸೇವಿಸುವವರು ಕಡಿಮೆಯಾಗಿದ್ದಾರೆ. ಮಜ್ಜಿಗೆಯಲ್ಲಿ ಕರಿಬೇವಿನಸೊಪ್ಪು ಹಾಕಿಕೊಂಡು ಸೇವಿಸಿದರೆ ಅದು ದಿವ್ಯೌಷಧ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.

ಕಣ್ಣಿನ ಆರೈಕೆಯಷ್ಟೇ, ರಕ್ಷಣೆಯೂ ಬಹಳ ಮುಖ್ಯ. ಜಗತ್ತಿನಲ್ಲಿ ನಾಲ್ಕು ಕೋಟಿ ಅಂಧರಿದ್ದಾರೆ. ಭಾರತದಲ್ಲಿ ಸುಮಾರು 15ರಿಂದ 20 ಲಕ್ಷ ಅಂಧರಿದ್ದಾರೆ. ಅಂಧತ್ವ ನಿವಾರಣೆ ಮಾಡಬೇಕಾದರೆ ಪ್ರತಿಯೊಬ್ಬರು ಮರಣದ ನಂತರ ಕಣ್ಣುಗಳನ್ನು ದಾನ ಮಾಡಬೇಕು ಎಂದು ತಿಳಿಸಿದರು.

ADVERTISEMENT

ಲಯನ್ಸ್ ಕ್ಲಬ್ ನ ಪ್ರಾದೇಶಿಕ ವಲಯದ ಅಧ್ಯಕ್ಷ ಬಿ. ನಿರಂಜನ್‌ ಮಾತನಾಡಿ ಆಲ್ಕೋಹಾಲ್ ಮತ್ತು ನಿಕೋಟಿನ್ ಸೇವನೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಗರ್ಭಿಣಿ ಹಂತದಲ್ಲಿ ಮಗುವಿಗೆ ಕಣ್ಣಿನ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಸಮಾಜದಲ್ಲಿರುವ ಎಲ್ಲರೂ ಕಣ್ಣಿನ ದಾನದ ಮಹತ್ವ ಕುರಿತು ಅರಿಯಬೇಕಾಗಿದೆ. ರಾಮನಗರದಲ್ಲಿ 2019ರ ಜನವರಿ 26ರಂದು ಲಯನ್ಸ್ ಕಣ್ಣಿನ ಆಸ್ಪತ್ರೆಯನ್ನು ಉದ್ಘಾಟಿಸಲಾಗುವುದು. ಇದರಿಂದ ಸಮಾಜದಲ್ಲಿನ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸಾಹುಕಾರ್ ಅಮ್ಜದ್‌, ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಐಯ್ಯರ್, ಖಜಾಂಚಿ ಷಫಿ ಅಹಮದ್‌, ಪದಾಧಿಕಾರಿಗಳಾದ ಎಚ್. ಶಬೀರ್ ಅಹಮದ್, ಎಸ್‌.ಎ. ಕರೀಂ, ಜಿ. ಮೋಹನ್‌, ಲಯನೆಸ್‌ ಕ್ಲಬ್‌ ಅಧ್ಯಕ್ಷೆ ಎಂ.ಎಸ್. ಲಾವಣ್ಯ, ಭಾರತ ವಿಕಾಸ ಪರಿಷದ್‌ನ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಎನ್.ವಿ. ಲೋಕೇಶ್, ಡಾ. ಸಲ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.