ADVERTISEMENT

ಚುನಾವಣೆಗೆ ಮುನ್ನವೇ ‘ಫೇಸ್‌ಬುಕ್‌ ಮತದಾನ’

ಕಾರ್ಯಕರ್ತರಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನಾಭಿಪ್ರಾಯ ಸಂಗ್ರಹ; ಅಭ್ಯರ್ಥಿ ಆಯ್ಕೆಗೂ ಒತ್ತು

ಆರ್.ಜಿತೇಂದ್ರ
Published 3 ಮೇ 2019, 16:22 IST
Last Updated 3 ಮೇ 2019, 16:22 IST
ಫೇಸ್‌ಬುಕ್‌ನಲ್ಲಿ ಹಾಕಲಾದ ಅಭಿಪ್ರಾಯ ಸಂಗ್ರಹದ ಪೋಸ್ಟ್‌
ಫೇಸ್‌ಬುಕ್‌ನಲ್ಲಿ ಹಾಕಲಾದ ಅಭಿಪ್ರಾಯ ಸಂಗ್ರಹದ ಪೋಸ್ಟ್‌   

ರಾಮನಗರ: ಲೋಕಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಳ್ಳುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ‘ಮತದಾನ’ ನಡೆದಿದೆ. ಅಭಿಮಾನಿಗಳು/ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರ ಪರ ಪ್ರಚಾರವನ್ನೂ ನಡೆಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯೇ ಫೇಸ್‌ಬುಕ್‌ನಲ್ಲಿ ಕೆಲವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಫೇಸ್‌ಬುಕ್‌ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಆರಂಭಿಸಿದ್ದಾರೆ. ಸಾವಿರಾರು ಮಂದಿ ಇದರಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ಯಾರ್‍ಯಾರು ಅಭ್ಯರ್ಥಿ: ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ. ಸುರೇಶ್‌ ಅವರೇ ಎಲ್ಲ ಕಡೆ ಬಿಂಬಿತರಾಗಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿಯಾಗಿ ಹೆಚ್ಚಿನವರು ಸಿ.ಪಿ. ಯೋಗೇಶ್ವರ್‌ ಪರ ಒಲವು ವ್ಯಕ್ತಪಡಿಸಿದ್ದಾರೆ. ಸಿಪಿವೈರನ್ನೇ ಸುರೇಶ್‌ ಎದುರು ಅಭ್ಯರ್ಥಿಯಾಗಿಸಿ ಆನ್‌ಲೈನ್‌ ಮತದಾನ ನಡೆಸಿದ್ದಾರೆ. ಇನ್ನೂ ಕೆಲವರು ತುಳಸಿ ಮುನಿರಾಜು ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಹೆಸರನ್ನೂ ತೇಲಿಬಿಟ್ಟಿದ್ದಾರೆ. ಇನ್ನೂ ಕೆಲವು ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಯಾರಾಗಬೇಕು ಎಂಬುದಕ್ಕೆ ಅಭಿಪ್ರಾಯ ಸಂಗ್ರಹಿಸತೊಡಗಿದ್ದಾರೆ.

ADVERTISEMENT

ಸಮಬಲ: ಫೇಸ್‌ಬುಕ್‌ ಮತದಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಸಮಬಲದ ಹೋರಾಟ ನಡೆದಿದೆ. ಕೆಲವು ಪುಟಗಳಲ್ಲಿ ಸುರೇಶ್‌ ಮುಂದಿದ್ದರೆ, ಇನ್ನೂ ಕೆಲವು ಕಡೆ ಯೋಗೇಶ್ವರ್‌ ಮುನ್ನಡೆಯಲ್ಲಿ ಇದ್ದಾರೆ.

ಭರ್ಜರಿ ಮತದಾನ: ಏಪ್ರಿಲ್‌ 18ರಂದು ಮತದಾನದ ದಿನ ಎಷ್ಟು ಮಂದಿ ಮತಗಟ್ಟೆಗೆ ಬರುತ್ತಾರೋ ಗೊತ್ತಿಲ್ಲ. ಆದರೆ ಅಂತರ್ಜಾಲದಲ್ಲಿ ಮತದಾನಕ್ಕೆ ಮಾತ್ರ ವಿಪರೀತ ಉತ್ಸಾಹ ತೋರಿದ್ದಾರೆ. ಒಂದು ಪುಟದಲ್ಲಿ ನಡೆದಿರುವ ಮತದಾನ ಪ್ರಕ್ರಿಯೆಯಲ್ಲಿ 48 ಸಾವಿರ ಮಂದಿ ಈಗಾಗಲೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಠುಸ್‌: ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಾಗೂ ರಾಮನಗರ ಉಪ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಬ್ಬರಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಸಂಸತ್‌ ಚುನಾವಣೆಯಲ್ಲಿ ಮಂಕಾಗಿ ಹೋಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿ ಇಲ್ಲದೇ ಇರುವುದು ಅವರ ನಿರುತ್ಸಾಹಕ್ಕೆ ಕಾರಣ. ಈವರೆಗೆ ಯಾವ ಜೆಡಿಎಸ್‌ ಕಾರ್ಯಕರ್ತರೂ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸಿ ಒಂದೇ ಒಂದು ಪೋಸ್ಟ್‌ ಕೂಡ ಹಾಕಿಲ್ಲ.

**
ಚುನಾವಣಾ ಆಯೋಗ ನಿರ್ಬಂಧ
ಫೇಸ್‌ಬುಕ್‌, ವ್ಯಾಟ್ಸಪ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾದ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗವು ಈ ಬಾರಿ ನಿರ್ಬಂಧ ಹೇರಿದೆ. ಆದರೆ ಆ ನಿಯಮಗಳು ಯಾವುದೂ ಫೇಸ್‌ಬುಕ್‌ ಬಳಕೆದಾರರ ಗಮನಕ್ಕೆ ಬಂದಂತೆ ಇಲ್ಲ. ಮತದಾನ ನಡೆಸುವುದು, ಒಬ್ಬ ಅಭ್ಯರ್ಥಿಯ ಪರವಾದ ಜನಾಭಿಪ್ರಾಯ ಮೂಡುವಂತೆ ಮಾಡುವುದಕ್ಕೆ ಆಯೋಗವು ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಹ ಪೋಸ್ಟ್‌ಗಳ ಮೇಲೆ ಕಣ್ಣಿಟ್ಟಿದೆ. ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

**
ಗಂಭೀರವಾಗಿ ಪರಿಗಣನೆ
‘ಸಾರ್ವಜನಿಕ ಅಭಿಪ್ರಾಯ ಕ್ರೂಢೀಕರಣದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಅತಿ ಮುಖ್ಯವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಇವುಗಳ ಪಾತ್ರವೂ ಇದೆ. ಹೀಗಾಗಿ ಸದ್ಯ ಅಂತರ್ಜಾಲ ಮಾಧ್ಯಮದಲ್ಲಿ ವ್ಯಕ್ತವಾಗುತ್ತಿರುವ ಎಲ್ಲ ಅಭಿಪ್ರಾಯಗಳನ್ನೂ ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುತ್ತಿವೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಇದು ಮಹತ್ವದ ಪಾತ್ರ ವಹಿಸಲಿದೆ’ ಎನ್ನುತ್ತಾರೆ ರಾಜಕೀಯ ಪಕ್ಷವೊಂದರ ಮುಖಂಡರು.

**
ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಸಂಗ್ರಹಿಸುವುದು, ಒಬ್ಬ ವ್ಯಕ್ತಿಯ ಪರ ಜನಾಭಿಪ್ರಾಯ ಬರುವಂತೆ ಮಾಡುವುದು ತಪ್ಪು. ಚುನಾವಣಾ ಆಯೋಗವು ಇದನ್ನು ನಿರ್ಬಂಧಿಸಿದೆ
– ಕೆ. ರಾಜೇಂದ್ರ, ಚುನಾವಣಾಧಿಕಾರಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.