ADVERTISEMENT

ರಾಮನಗರ | ಜಾಮೀನಿಗೆ ಸುಳ್ಳು ದಾಖಲೆ: ಎಫ್‌ಐಆರ್

ಕ್ರಿಮಿನಲ್ ಆರೋಪಿ ಜಾಮೀನಿಗೆ ಬೇರೆಯವರ ಜಮೀನಿನ ಪಹಣಿ ಕೊಟ್ಟು ಕೋರ್ಟ್‌ಗೆ ವಂಚಿಸಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:00 IST
Last Updated 21 ಸೆಪ್ಟೆಂಬರ್ 2025, 4:00 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

ರಾಮನಗರ: ಕ್ರಿಮಿನಲ್ ಪ್ರಕರಣದ ಆರೋಪಿ ಪರವಾಗಿ ನ್ಯಾಯಾಲಯಕ್ಕೆ ಜಮೀನಿನ ಸುಳ್ಳು ದಾಖಲೆ ನೀಡಿ ಜಾಮೀನು ಕೊಡಿಸಿದ್ದ ಮಹಿಳೆ ವಿರುದ್ಧ ನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹಾಳಹಳ್ಳಿಯ ಬೋರಮ್ಮ (33) ಕೋರ್ಟ್‌ಗೆ ವಂಚಿಸಿದ ಮಹಿಳೆ.

ಅತ್ಯಾಚಾರ ಮತ್ತು ಕೊಲೆ ಆರೋಪ ಎದುರಿಸುತ್ತಿರುವ ಮಾಗಡಿಯ ಹೊಸಪೇಟೆ ವೃತ್ತದ ಕುಲುಮೆ ಬೀದಿಯ ಶಂಭುಲಿಂಗ ಅಲಿಯಾಸ್ ಶಂಭಿ ಎಂಬಾತನ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ಇಲ್ಲಿನ 3ನೇ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 2019ರಲ್ಲಿ ಆರೋಪಿಗೆ ಜಾಮೀನು ಕೊಡಿಸಲು ಬೋರಮ್ಮ ಮುಂದಾಗಿದ್ದಳು.

ADVERTISEMENT

ಅದಕ್ಕಾಗಿ, ನಾಗಮಂಗಲ ತಾಲ್ಲೂಕಿನ ಆಲ್ಪನಹಳ್ಳಿ ವಾಸಿಯಾದ ತನ್ನದೇ ಹೆಸರಿನ 93 ವರ್ಷದ ವೃದ್ಧೆಯ ಹೆಸರಿನಲ್ಲಿದ್ದ ಜಮೀನಿನ ಪಹಣಿ ಮತ್ತು ಆಧಾರ್ ಅನ್ನು ಕೋರ್ಟ್‌ಗೆ ಸಲ್ಲಿಸಿದ್ದಳು. ಜಾಮೀನು ಪಡೆದ ಬಳಿಕ ಶಂಭುಲಿಂಗ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿ ಹಾಗೂ ಜಾಮೀನುದಾರರಿಗೆ ಹಲವು ನೋಟಿಸ್ ಕೊಟ್ಟರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ.

ಕಡೆಗೆ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊಡೆಸಿತ್ತು. ಪೊಲೀಸರು ಆರೋಪಿ ಶಂಭುಲಿಂಗನನ್ನು ಪತ್ತೆಹಚ್ಚಿ ಕೋರ್ಟ್‌ಗೆ ಹಾಜರುಪಡಿಸಿದಾಗ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆತನಿಗೆ ಜಾಮೀನು ನೀಡಿದ್ದ ಬೋರಮ್ಮನ ಜಮೀನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿ, ನಾಗಮಂಗಲ ತಹಸೀಲ್ದಾರ್‌ಗೆ ಸೂಚಿಸಿತ್ತು.

ಜಾಮೀನಿಗೆ ಕೊಟ್ಟಿದ್ದ ಪಹಣಿ ಪರಿಶೀಲಿಸಿದ ತಹಶೀಲ್ದಾರ್, ಪಹಣಿಯು ಆಲ್ಪಹಳ್ಳಿಯ 93 ವರ್ಷ ವಯಸ್ಸಿನ ಬೋರಮ್ಮ ಅವರದ್ದಾಗಿದೆ. ಇವರು ಕೋರ್ಟ್‌ಗೂ ಹಾಜರಾಗಿ ಯಾವುದೇ ಜಾಮೀನು ನೀಡಿಲ್ಲ. ಅಲ್ಲದೆ, ಇದೇ ಹೆಸರಿನ ಬೋರಮ್ಮ ಎಂಬುವರು ಕೋರ್ಟ್‌ಗೆ ಕೊಟ್ಟಿರುವ ಆಧಾರ್ ಸಂಖ್ಯೆಗೂ, ಆಲ್ಪಹಳ್ಳಿಯಲ್ಲಿ ಜಮೀನು ಹೊಂದಿರುವ ಬೋರಮ್ಮನ ಆಧಾರ್ ಸಂಖ್ಯೆಗೂ ವ್ಯತ್ಯಾಸ ಇರುವುದನ್ನ ಗಮನಕ್ಕೆ ತಂದಿದ್ದರು.

ಕ್ರಿಮಿನಲ್ ಆರೋಪಿಗೆ ಜಾಮೀನು ಕೊಡಿಸಲು ಸುಳ್ಳು ದಾಖಲೆ ನೀಡಿರುವುದು ಗೊತ್ತಾಗುತ್ತಿದ್ದಂತೆ, ನ್ಯಾಯಾಧೀಶರ ಸೂಚನೆ ಮೇರೆಗೆ ನ್ಯಾಯಾಲದ ಅಧಿಕಾರಿ ಕೆ. ಪುಟ್ಟಸ್ವಾಮಿ ಅವರು ಮಹಿಳೆ ವಿರುದ್ಧ ಐಜೂರು ಠಾಣೆಗೆ ದೂರು ಕೊಟ್ಟಿದ್ದಾರೆ. ಆ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.