ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ಹೆಸರಲ್ಲಿ ಮಾಗಡಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದ ಆರೋಪಿಯನ್ನು ಐಜೂರು ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಮುರಿಗೆಪ್ಪ ನಿಂಗಪ್ಪ ಕುಂಬಾರ (60) ಬಂಧಿತ ವ್ಯಕ್ತಿ. ಆತನಿಂದ 2 ಮೊಬೈಲ್ ಫೋನ್ ಮತ್ತು 9 ಸಿಮ್ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ 17 ವರ್ಷ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸಿದ್ದ ಮುರಿಗೆಪ್ಪ, ಲೋಕಾಯುಕ್ತದಲ್ಲೂ 3 ವರ್ಷ ಕೆಲಸ ಮಾಡಿದ್ದ. ಆಗ ಆರೋಪಿಗಳಿಗೆ ನೀಡುವ ವಾರೆಂಟ್ ಅನ್ನು ಹಣಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದ. ಈ ಕುರಿತು ನಡೆದಿದ್ದ ಇಲಾಖಾ ವಿಚಾರಣೆಯಲ್ಲಿ ಆತನ ಕೃತ್ಯ ಸಾಬೀತಾಗಿ, ಸೇವೆಯಿಂದ ವಜಾಗೊಂಡಿದ್ದ.
ಮಹಾರಾಷ್ಟ್ರದಲ್ಲಿ ಸೆರೆ: ಆರೋಪಿ ವಿರುದ್ಧ ದಾಖಲಾಗಿದ್ದ ಪ್ರಕರಣದ ಬೆನ್ನತ್ತಿದ್ದ ಪೊಲೀಸರು, ಆತನ ಮೊಬೈಲ್ ಸಂಖ್ಯೆಯ ಕರೆ ವಿವರಗಳು ಮತ್ತು ಟವರ್ ಲೊಕೇಷನ್ ಆಧರಿಸಿ, ಆತ ಇರುವ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಲಾಯಿತು.
ಕಡೆಗೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಜೈಯಸಿಂಗ್‌ಪುರ ಎಂಬ ಗ್ರಾಮದಲ್ಲಿ ಆರೋಪಿ ಇರುವುದು ಖಚಿತವಾಯಿತು. ಸ್ಥಳಕ್ಕೆ ತೆರಳಿ ಮುರಿಗೆಪ್ಪನನ್ನು ಬಂಧಿಸಿ ರಾಮನಗರಕ್ಕೆ ಕರೆತರಲಾಯಿತು.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಿಡ್ನಿ ಸಮಸ್ಯೆ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ಆರೋಪಿಗೆ ಚಿಕಿತ್ಸೆ ಕೊಡುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.
ವೆಬ್‌ಸೈಟ್‌ನಿಂದ ಮಾಹಿತಿ: ಲೋಕಾಯುಕ್ತದಲ್ಲಿ ಕೆಲಸ ಮಾಡುವಾಗ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿಯನ್ನು ಚನ್ನಾಗಿ ಅರಿತಿದ್ದ ಆರೋಪಿ, ಯಾರಿಗೂ ಅನುಮಾನ ಬಾರದಂತೆ ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಸುತ್ತಿದ್ದ. ತನ್ನ ಪರಿಚಿತರ ಮೊಬೈಲ್ ಸಂಖ್ಯೆಗೆ ಫೋನ್‌ಪೇ ಅಥವಾ ಗೂಗಲ್‌ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ಆರೋಪಿ, ಬಳಿಕ ಅವರಿಂದ ಹಣ ಪಡೆದುಕೊಳ್ಳುತ್ತಿದ್ದ.
ಟ್ರೂ ಕಾಲರ್‌ನಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮತ್ತು ಇನ್‌ಸ್ಪೆಕ್ಟರ್ ಎಂದು ನಮೂದಿಸಿಕೊಂಡಿದ್ದ. ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿದಾಗ, ಮೊಬೈಲ್ ಸಂಖ್ಯೆಯು ಲೋಕಾಯುಕ್ತ ಎಂದು ತೋರಿಸುತ್ತಿದ್ದರಿಂದ ಅಧಿಕಾರಿಗಳು ನಿಜವೆಂದು ನಂಬಿ ಭಯದಿಂದ ಹಣ ವರ್ಗಾವಣೆ ಮಾಡುತ್ತಿದ್ದರು.
ಜಿಲ್ಲೆಗಳ ವೆಬ್‌ಸೈಟ್‌ಗಳಲ್ಲಿ ಸಿಗುವ ಅಧಿಕಾರಿಗಳ ಮೊಬೈಲ್ ಸಂಖ್ಯೆಯಲ್ಲಿ ಕೆಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಆರೋಪಿ, ತನ್ನ ಗ್ರಾಮದಲ್ಲೇ ಕುಳಿತು ಕರೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ವಸೂಲಿ ಹಣವನ್ನು ತನ್ನ ಚಟಗಳಿಗೆ ಖರ್ಚು ಮಾಡುತ್ತಿದ್ದ. ಹಣ ಖಾಲಿಯಾದ ಬಳಿಕ, ಮತ್ತೆ ಕರೆ ಮಾಡಿ ವಸೂಲಿ ಆರಂಭಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಐಜೂರು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಹೇಶ್ ಎಸ್., ಕಾನ್‌ಸ್ಟೆಬಲ್‌ಗಳಾದ ಚನ್ನಬಸಪ್ಪ ಹಾಗೂ ಯಲ್ಲಪ್ಪ ಶಿರಶ್ಯಾಡ್ ಅವರನ್ನು ಒಳಗೊಂಡ ತಂಡವು ಆರೋಪಿಯನ್ನು ಮಹಾರಾಷ್ಟ್ರದಿಂದ ಬಂಧಿಸಿ ಕರೆ ತಂದಿದೆ.
50ಕ್ಕೂ ಹೆಚ್ಚು ಪ್ರಕರಣ
ಸೇವೆಯಿಂದ ವಜಾಗೊಂಡ ಬಳಿಕ ಮುರಿಗೆಪ್ಪ ಮದ್ಯವ್ಯಸನಿಯಾಗಿದ್ದ. ತನ್ನ ಚಟಕ್ಕೆ ಹಣಕ್ಕಾಗಿ ತಾನು ಕೆಲಸ ಮಾಡುತ್ತಿದ್ದ ಲೋಕಾಯುಕ್ತದ ಹೆಸರಿನಲ್ಲೇ ಅಧಿಕಾರಿಗಳ ಸುಲಿಗೆಗೆ ಇಳಿದಿದ್ದ. ಆನ್‌ಲೈನ್ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಆರೋಪಿ ಅವರ ವಿರುದ್ಧ ದೂರು ದಾಖಲಾಗಿದೆ ಎಂದು ಡಿವೈಎಸ್ಪಿ ಹೆಸರಿನಲ್ಲಿ ಬೆದರಿಸುತ್ತಿದ್ದ. ಕಡೆಗೆ ತಮ್ಮ ವಿರುದ್ದದ ದೂರಿಗೆ ‘ಸಿ’ ವರದಿ ಸಲ್ಲಿಸುವುದಾಗಿ ಹೇಳಿ ಆನ್‌ಲೈನ್ ಮೂಲಕ ಹಣ ವಸೂಲಿ ಮಾಡುತ್ತಿದ್ದ. ಆತನ ವಿರುದ್ದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಂಚನೆಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವ ಈತ ಮತ್ತೆ ತನ್ನ ಚಾಳಿ ಮುಂದುವರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.