ಮಾಗಡಿ: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಬಳಿ ಈಚೆಗೆ ಮಾಜಿ ಶಾಸಕ ಎ.ಮಂಜುನಾಥ್ ಅವರಿಗೆ ಸೇರಿದ ಕಾರು ನೋ ಪಾರ್ಕಿಂಗ್ ಬಳಿ ನಿಲ್ಲಿಸಲಾಗಿತ್ತು. ಕಾರಿಗೆ ನಕಲಿ ಪ್ಲೇಟ್ ಬಸಲಾಗಿದೆ ಎಂಬ ಕಾರಣಕ್ಕೆ ಸದಾಶಿವನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಕಾರಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಮಾಗಡಿ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಸ್ಪಷ್ಟನೆ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಜಿ ಶಾಸಕ ಎ.ಮಂಜುನಾಥ್ ಅವರು ಚುನಾವಣೆ ಸಂದರ್ಭದಲ್ಲಿ ಫಾರ್ಚೂನರ್ ಕಾರನ್ನು ಓಡಾಡಲು ಕೊಟ್ಟಿದ್ದರು. ನಂತರ ವಾಪಸ್ ಕೊಟ್ಟಿದ್ದೆ. 2021ರಲ್ಲಿ ಮಧು ಅಲಿಯಾಸ್ ಹರೀಶ್ ಎಂಬುವರಿಂದ ಎ.ಮಂಜುನಾಥ್ ಅವರಿಗೆ ತುರ್ತುಗಿ ₹20 ಲಕ್ಷ ಕೊಡಿಸಿದ್ದೆ. ಹಣ ಹಿಂದಿರುಗಿಸಿದ ಕಾರಣ ಸೆಪ್ಟೆಂಬರ್ 2023ರಲ್ಲಿ ಮಧು ಅವರಿಗೆ ₹20ಲಕ್ಷ ಬದಲಿಗೆ ಈಗ ಪೊಲೀಸರು ವಶಕ್ಕೆ ಪಡೆದಿರುವ ಕಾರನ್ನು ಅವರಿಗೆ ಕೊಟ್ಟು ಫಾರಂ ನಂಬರ್ 29ಕ್ಕೆ ಎ.ಮಂಜುನಾಥ್ ಸಹಿ ಮಾಡಿ ಫಾರ್ಚೂನರ್ ಕಾರು ಕೊಟ್ಟಿದ್ದಾರೆ’.
‘ಅಲ್ಲಿಂದ ನಾನು ಆ ಕಾರನ್ನು ಬಳಸೇ ಇಲ್ಲ. ಕಾರು ಎಲ್ಲಿ ನಿಲ್ಲುತ್ತಿತ್ತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಸದಾಶಿವನಗರ ಪೊಲೀಸರಿಗೆ ಕೊಟ್ಟಿದ್ದೇನೆ. ಈಗ ಮಧು ಎಂಬುವರು ಸಾವನ್ನಪ್ಪಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆ ಬಳಿ ಯಾರು ಕಾರು ತಂದಿದ್ದಾರೆ ಮತ್ತು ಕಾರಿನ ನಂಬರ್ ಪ್ಲೇಟ್ ಬದಲಿಸಿ ಓಡಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ.’
‘ಎ.ಮಂಜುನಾಥ್ ಪೊಲೀಸರಿಗೆ ನನ್ನ ಹೆಸರು ಹೇಳಿ ತೇಜೋವಧೆ ಮಾಡಲು ಈ ಕೃತ್ಯ ಮಾಡಿದ್ದಾರೆ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಮೇಲೆ ಎಲ್ಲೂ ಕೂಡ ಅವರ ಮೇಲೆ ಆರೋಪ ಮಾಡಿಲ್ಲ. ಈಗ ನನ್ನ ಹೆಸರು ತಂದು ತಳಕು ಹಾಕುತ್ತಿರುವುದು ಸರಿಯಲ್ಲ. ಪೊಲೀಸ್ ಠಾಣೆಯಲ್ಲಿ ಸ್ಪಷ್ಟ ಮಾಹಿತಿ ಕೊಟ್ಟಿದ್ದೇನೆ. ಆ ಕಾರಿಗೂ ನನಗೂ ಸಂಬಂಧವಿಲ್ಲ’ ಎಂದು ಪೂಜಾರಿ ಪಾಳ್ಯ ಕೃಷ್ಣಮೂರ್ತಿ ತಿಳಿಸಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಅಶ್ವತ್ಥ್, ಮಾಜಿ ಸದಸ್ಯರಾದ ರೂಪೇಶ್, ಮುಖಂಡರಾದ ಚಿಕ್ಕಣ್ಣ, ಅಶೋಕ್, ತೇಜು, ಶಾಂತರಾಜು, ನರಸಿಂಹಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.