ADVERTISEMENT

ರೈತ ದಿನಾಚರಣೆ: ಪ್ರಗತಿಪರ ರೈತರಿಗೆ ಸನ್ಮಾನ

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:48 IST
Last Updated 23 ಡಿಸೆಂಬರ್ 2019, 13:48 IST
ಮಾಗಡಿ ಕೆವಿಕೆ ವತಿಯಿಂದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು
ಮಾಗಡಿ ಕೆವಿಕೆ ವತಿಯಿಂದ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು   

ಮಾಗಡಿ: ‘ರೈತರು ಕೃಷಿ ಮತ್ತು ಇತರ ಇಲಾಖೆಗಳು ಕೊಡಮಾಡಿರುವ ಸವಲತ್ತುಗಳನ್ನು ಬಳಸಿಕೊಂಡು, ಕಡಿಮೆ ನೀರು ಬಳಸಿ, ವಿಜ್ಞಾನಿಗಳ ಸಲಹೆಯಂತೆ ತಾಂತ್ರಿಕ ಬೇಸಾಯ ಮಾಡಲು ಮುಂದಾಗಬೇಕು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್‌ ತಿಳಿಸಿದರು.

ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಗುರುವಾರ ನಡೆದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಕಲ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ. ಸಿದ್ಧರಾಜು ಅವರು ಮಾತನಾಡಿ, ‘ರೈತರು ಕೃಷಿಯಿಂದ ವಿಮುಖರಾಗಿ ಪಟ್ಟಣಕ್ಕೆ ವಲಸೆ ಹೋಗದೆ ಆಧುನಿಕ ಕೃಷಿಯನ್ನು ವಿಜ್ಞಾನಿಗಳ ಸಲಹೆಯಂತೆ ಅಳವಡಿಸಿಕೊಂಡು, ಕೃಷಿ ಉತ್ಪನ್ನಗಳನ್ನು ನೇರ ಮಾರುಕಟ್ಟೆ ಮಾಡುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು.ರೈತ ದಿನಾಚರಣೆಯಂದು ರೈತರ ಕಷ್ಟಗಳನ್ನು ನೆನೆದು ಅವರಿಗೆ ಬೆನ್ನೆಲುಬಾಗಿ ನಿಂತು ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.

ADVERTISEMENT

ಕೆವಿಕೆ ಮುಖ್ಯಸ್ಥೆ ಡಾ.ಸವಿತಾ ಎಸ್.ಎಂ. ಮಾತನಾಡಿ, ‘ರೈತ ದಿನಾಚರಣೆಯ ಮಹತ್ವ ಹಾಗೂ ಈ ದಿನಾಚರಣೆಯನ್ನು ಆಚರಿಸುವ ಹಿನ್ನೆಲೆಯನ್ನು ಕುರಿತು ಮಾಹಿತಿ ನೀಡಿದರು ಮತ್ತು ಕೇಂದ್ರದ ಧ್ಯೇಯೋದ್ದೇಶಗಳನ್ನು ವಿವರಿಸಿ, ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಬೆಳೆ ಹಾಗೂ ಇತರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಅಧಿಕ ಇಳುವರಿ ಪಡೆದುಕೊಂಡು ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಹೆಚ್ಚು ಲಾಭ ಗಳಿಸಬೇಕು’ ಎಂದು ಕರೆ ನೀಡಿದರು.

ಕೃಷಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕಿ ಡಾ.ಬಿ.ಜಿ.ವಾಸಂತಿ ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಪ್ರಾಮುಖ್ಯತೆ ವಿವರಿಸಿದರು. ವೈಜ್ಞಾನಿಕ ವಿಧಾನದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಿದರೆ ಹೆಚ್ಚಿನ ಆದಾಯಗೊಳಿಸಲು ಸಾಧ್ಯ’ ಎಂದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ‘ವೈಜ್ಞಾನಿಕವಾಗಿ ಹನಿ ನೀರಾವರಿಯನ್ನು ಅಳವಡಿಸಿಕೊಂಡು ರೇಷ್ಮೆಯನ್ನು ಬೆಳೆಯುವುದರ ಮುಖಾಂತರ ಹೆಚ್ಚಿನ ಆದಾಯವನ್ನು ಗಳಿಸಲು ಸಾಧ್ಯ ಮತ್ತು ತಮ್ಮ ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಸದುಪಯೋಗ ಪಡೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಡಿಜಿಟಲ್ ಗ್ರೀನ್‌ ಕ್ಷೇತ್ರ ಸಂಯೋಜಕಿ ಭಾಗ್ಯವತಿ ಮೊಬೈಲ್ ಆ್ಯಪ್‌ನಿಂದ ಕೃಷಿಯಲ್ಲಿ ತಾಂತ್ರಿಕ ಮಾಹಿತಿಗಳನ್ನು ಪಡೆದುಕೊಂಡು ಮಾರುಕಟ್ಟೆ ಜೋಡಣೆ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರದ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿದರು. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಆಯೋಜಿಸಲಾದ ಕೃಷಿ ಮೇಳ 2019ರ ಪ್ರಶಸ್ತಿ ಪುರಸ್ಕೃತ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಸಾಧಕ ರೈತರು ತಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು.

ಐ.ಆರ್.ಡಿ.ಐ.ಎಸ್. ಸಂಸ್ಥೆ ಗೋವಿಂದರಾಜು, ಪ್ರಗತಿಪರ ರೈತರಾದ ಅಂಚೆಪಾಳ್ಯ ರಮೇಶ್‌, ಹುಚ್ಚಹನುಮೇಗೌಡರ ಪಾಳ್ಯದ ಶಿವಕುಮಾರ್‌, ಬಸವನಪಾಳ್ಯದ ಸಿದ್ದರಾಜು, ಗೌಡರಪಾಳ್ಯದ ಅಂಬಿಕಾರಂಗಸ್ವಾಮಯ್ಯ, ವಿಕಾಸ, ಎ.ಎನ್. ಪ್ರವೀಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.