ADVERTISEMENT

ರಾಮನಗರ: ಇನ್ನೂ ಬಂದಿಲ್ಲ ರಾಗಿ ಹಣ!

ಬೆಂಬಲ ಬೆಲೆ ಖರೀದಿಯ ಬಾಕಿ ಉಳಿಸಿಕೊಂಡ ಸರ್ಕಾರ: ಖಾತೆ ಸಮಸ್ಯೆ ಎನ್ನುವ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 15:20 IST
Last Updated 4 ಸೆಪ್ಟೆಂಬರ್ 2020, 15:20 IST

ರಾಮನಗರ: ಕಳೆದ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಬೆಂಬಲ ಬೆಲೆ ಅಡಿ ರಾಗಿ ಮಾರಾಟ ಮಾಡಿದ್ದ ಜಿಲ್ಲೆಯ ರೈತರ ಪೈಕಿ ಇನ್ನೂ ಕೆಲವರಿಗೆ ಹಣ ತಲುಪಿಲ್ಲ. ಇದರಿಂದಾಗಿ ಕೃಷಿಕರು ಕಂಗಾಲಾಗಿದ್ಧಾರೆ.

ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಬೆಂಬಲ ಬೆಲೆ ಅಡಿ ರಾಗಿ ನೀಡಿದ್ದ ರೈತರ ಪೈಕಿ ಶೇ ೨೦ರಷ್ಟು ಮಂದಿಗೆ ಇನ್ನೂ ಸರ್ಕಾರ ಹಣ ನೀಡಿಲ್ಲ. ಬಿಡುಗಡೆಯಾದ ಹಣವೂ ಕೆಲವೆಡೆ ಅರ್ಹ ಫಲಾನುಭವಿಗೆ ತಲುಪದೇ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ ಖರೀದಿ ಕೇಂದ್ರಗಳ ಮೂಲಕ 1.69 ಲಕ್ಷ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿತ್ತು. 4 ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆದಿದ್ದ ಸರ್ಕಾರ ಫೆಬ್ರವರಿ, ಮಾರ್ಚ್ ನಲ್ಲಿ ರಾಗಿ ಖರೀದಿ ಮಾಡಿತ್ತು. ಪ್ರತಿ ಕ್ವಿಂಟಲ್‌ಗೆ ₨3,150 ಬೆಲೆ ನಿಗದಿಯಾಗಿತ್ತು.

"ಜಿಲ್ಲೆಯಲ್ಲಿ ಎಲ್ಲರಿಗು ಹಣ ಪಾವತಿಯಾಗಿದೆ. ಆದರೆ, 80-90 ರೈತರಿಗೆ ಮಾತ್ರ ಹಣ ಬಿಡುಗಡೆಯಾಗಿಲ್ಲ. ಕೆಲವರ ಆಧಾರ್‌ ಖಾತೆಗಳು ಬ್ಯಾಂಕ್‌ ಜೊತೆ ಲಿಂಕ್‌ ಆಗದ ಕಾರಣ ಸಮಸ್ಯೆ ಆಗಿದೆ. ಅಂತಹವರಿಗೆ ನೇರ ಹಾಗು ಡಿವಿಡಿ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂಬುದು ಅಧಿಕಾರಿಗಳ ಸಬೂಬು.

ADVERTISEMENT

ಆದರೆ ರೈತರು ಇದನ್ನು ಒಪ್ಪುವುದಿಲ್ಲ. ನಮ್ಮ ಖಾತೆಗಳು ಈಗಾಗಲೇ ಆಧಾರ್‌ ಜೊತೆ ಲಿಂಕ್‌ ಆಗಿವೆ. ಕೊರೊನಾ ಕಾರಣಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎನ್ನುವುದು ರೈತರ ಆರೋಪ.

***

ಅಧಿಕಾರಿಗಳ ಯಡವಟ್ಟು

ಚನ್ನಪಟ್ಟಣದ ನಿವಾಸಿ ಜಗದೀಶ್ ಕಳೆದ ಮಾರ್ಚ್‌ 10ರಂದು ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ್ದರು. 6 ತಿಂಗಳು ಅವರ ಖಾತೆಗೆ ಹಣ ಸೇರಿಲ್ಲ. ಕೃಷಿ ಇಲಾಖೆಯಲ್ಲಿ ವಿಚಾರಿಸಿದಾಗ ಅವರಿಗೆ ಬರಬೇಕಾದ 96,807 ಪಕ್ಕದ ಮನೆ ನಿವಾಸಿಗೆ ಸಂದಾಯ ಆಗಿರುವುದು ಬಂದಿತು. ಪಕ್ಕದ ಮನೆಯ ನಿವಾಸಿಯ ಹೆಸರು ಸಹ ಜಗದೀಶ್ ಆಗಿರುವುದರಿಂದ ಈ ಎಡವಟ್ಟು ಆಗಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಾದ. ಬಳಿಕ ಕೃಷಿ ಇಲಾಖೆ ಅಧಿಕಾರಿಗಳು ಪಕ್ಕದ ಮನೆ ನಿವಾಸಿಯ ಮನವೊಲಿಸಿ ಅಷ್ಟು ಹಣವನ್ನು ಇಲಾಖೆಗೆ ವಾಪಸ್ಸು ಪಡೆದಿದ್ದಾರೆ. ಆದರೆ, ರಾಗಿ ಮಾರಾಟ ಮಾರಿರುವ ರೈತನಿಗೆ ಹಣ ಬಿಡುಗಡೆಯಾಗಿಲ್ಲ.

***
ಖಾತೆ ಸಮಸ್ಯೆಯಿಂದಾಗಿ ಕೆಲವು ರೈತರಿಗೆ ಹಣ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದು, ಶೀಘ್ರ ಬಿಡುಗಡೆ ಆಗಲಿದೆ
-ಜಯಪ್ಪ ಡಿಎಂ, ಕೆಎಫ್‌ಸಿಎಸ್‌ಸಿ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.