ADVERTISEMENT

ರಾಮನಗರ: ಯೂರಿಯಾ ಕೊರತೆ, ರೈತರ ಪರದಾಟ

ರಸಗೊಬ್ಬರ ದಾಸ್ತಾನು ಸಂಪೂರ್ಣ ಖಾಲಿ: ಮಳಿಗೆಗಳಿಗೆ ಅಲೆದಾಟ

ಆರ್.ಜಿತೇಂದ್ರ
Published 16 ಸೆಪ್ಟೆಂಬರ್ 2020, 2:46 IST
Last Updated 16 ಸೆಪ್ಟೆಂಬರ್ 2020, 2:46 IST
   

ರಾಮನಗರ: ಜಿಲ್ಲೆಯಲ್ಲಿ ಯೂರಿಯಾ ಕೊರತೆ ತೀವ್ರವಾಗಿದ್ದು, ಸಕಾಲಕ್ಕೆ ರಸಗೊಬ್ಬರ ಸಿಗದೇ ರೈತರು ಪರದಾಡುವಂತೆ ಆಗಿದೆ.

ಕಳೆದೊಂದು ತಿಂಗಳಿಂದ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆ ಸಮರ್ಪಕವಾಗಿಲ್ಲ. ಜನರು ಸಹಕಾರ ಸೊಸೈಟಿಗಳು, ಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲತೊಡಗಿದ್ದಾರೆ. ಆದರೆ ಎಲ್ಲಿಯೂ ಗೊಬ್ಬರದ ದಾಸ್ತಾನು ಇಲ್ಲ. ಕೇಂದ್ರದಿಂದಲೇ ಗೊಬ್ಬರ ಪೂರೈಕೆ ವಿಳಂಬವಾಗುತ್ತಿರುವ ಕಾರಣ ಹಂಚಿಕೆಯಲ್ಲಿ ಕೊರತೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಈ ಬಾರಿ 60 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬಿತ್ತನೆಯಾಗಿದೆ. ಸದ್ಯ ಉತ್ತಮ ಮಳೆ ಆಗುತ್ತಿದ್ದು, ರಾಗಿಗೆ ಗೊಬ್ಬರದ ಅಗತ್ಯ ಇದೆ. ಹೀಗಾಗಿ ರೈತರು ಗೊಬ್ಬರದ ಅಂಗಡಿಗಳ ಮುಂದೆ ಅಲೆಯತೊಡಗಿದ್ದಾರೆ. ಆದರೆ ಎಲ್ಲಿಯೂ ಯೂರಿಯಾ ಸಿಗುತ್ತಿಲ್ಲ. ಆಗಾಗ್ಗೆ ಬರುವ ಅಲ್ಪ ಪ್ರಮಾಣದ ದಾಸ್ತಾನು ಕ್ಷಣಾರ್ಧದಲ್ಲೇ ಖಾಲಿಯಾಗತೊಡಗಿದೆ.

ADVERTISEMENT

"ರಸಗೊಬ್ಬರಕ್ಕಾಗಿ ಕಳೆದೊಂದು ವಾರದಿಂದಲೂ ಅಂಗಡಿಗಳ ಮುಂದೆ ಅಲೆಯುತ್ತಿದ್ದೇನೆ. ಆದರೆ ಎಲ್ಲೆಡೆ ಯೂರಿಯಾ ಲಭ್ಯವಿಲ್ಲ ಎನ್ನುವ ಉತ್ತರವಷ್ಟೇ ಸಿಗುತ್ತಿದೆ. ಸಕಾಲದಲ್ಲಿ ಗೊಬ್ಬರ ಹಾಕದೇ ಹೋದರೆ ನಿರೀಕ್ಷಿತ ಇಳುವರಿಯೂ ಸಿಗುವುದಿಲ್ಲ. ಕಷ್ಟಪಟ್ಟು ಬಿತ್ತನೆ ಮಾಡಿದ ಫಸಲು ಫಲ ಕೊಡುವುದು ಅನುಮಾನ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾಮನಗರ ತಾಲ್ಲೂಕಿನ ಜಾಲಮಂಗಲದ ರೈತ ಶಿವಣ್ಣ.

ಅಧಿಕಾರಿಗಳು ಹೇಳುವುದೇನು?: ಸದ್ಯ ಇಡೀ ರಾಜ್ಯದೆಲ್ಲೆಡೆ ರಸಗೊಬ್ಬರದ ಕೊರತೆ ತೀವ್ರವಾಗಿದೆ. ಅದರಲ್ಲಿಯೂ ಲಾಕ್‌ಡೌನ್‌ ಕಾರಣ ಅವಶ್ಯವಾದಷ್ಟು ಪ್ರಮಾಣದ ಗೊಬ್ಬರ ಉತ್ಪಾದನೆ ಮತ್ತು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಗೊಬ್ಬರ ಕೊರತೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.

"ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇರುವುದು ನಿಜ. ಕಳೆದೊಂದು ವಾರದಲ್ಲಿ ಸುಮಾರು 200 ಟನ್‌ನಷ್ಟು ಗೊಬ್ಬರ ಬಂದಿದ್ದು, ಅದನ್ನು ರೈತರಿಗೆ ವಿತರಣೆ ಮಾಡಿದ್ದೇವೆ. ಇನ್ನೂ 500 ಟನ್‌ಗೆ ಬೇಡಿಕೆ ಇರಿಸಿದ್ದು, ಶೀಘ್ರ ಪೂರೈಕೆ ಆಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್‌‌.

****

ಸದ್ಯಕ್ಕೆ 500 ಟನ್‌ ಯೂರಿಯಾ ತುರ್ತು ಪೂರೈಕೆಗೆ ಬೇಡಿಕೆ ಇಟ್ಟಿದ್ದೇವೆ. ಈ ವಾರ ಬರುವ ನಿರೀಕ್ಷೆ ಇದೆ
ಸೋಮಸುಂದರ್‌

– ಜಂಟಿ ನಿರ್ದೇಶಕ, ಕೃಷಿ ಇಲಾಖೆ

ಗೊಬ್ಬರ ವ್ಯಾಪಾರಿಗಳಿಗೆ ಯೂರಿಯಾ ಪೂರೈಕೆಗಾಗಿ 15 ದಿನ ಕಳೆದಿದೆ. ಬರುವ ಗೊಬ್ಬರ ಅದೇ ದಿನ ಖಾಲಿಯಾಗುತ್ತಿದೆ

– ಪೂರ್ಣಿಮಾ, ರಸಗೊಬ್ಬರ ವ್ಯಾಪಾರಿ, ರಾಮನಗರ

ರಾಗಿಗೆ ಸದ್ಯಕ್ಕೆ ಗೊಬ್ಬರ ಅತ್ಯಗತ್ಯವಾಗಿದೆ. ಯೂರಿಯಾ ಅಭಾವ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು

– ಶಿವಣ್ಣ, ರೈತ, ಜಾಲಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.