ADVERTISEMENT

ಯಂತ್ರಕ್ಕೆ ಸಿಲುಕಿ ಜಜ್ಜಿದ ಕೈಬೆರಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 14:08 IST
Last Updated 13 ಫೆಬ್ರುವರಿ 2020, 14:08 IST
ಮಾಗಡಿ ಕಬ್ಬಿನಿಂದ ಜ್ಯೂಸ್‌ ತಯಾರಿಸುವ ಯಂತ್ರಕ್ಕೆ ಬೆರಳುಗಳು ಸಿಲುಕಿ ನರಳುತ್ತಿದ್ದ ಕೂಲಿಕಾರ್ಮಿಕ ಯೂಸಫ್‌ನನ್ನು ಹೊರತೆಗೆಯಲು ಹರಸಾಹಸ ಪಟ್ಟ ಅಕ್ರಂ ಮತ್ತು ಇಮ್ರಾನ್‌.
ಮಾಗಡಿ ಕಬ್ಬಿನಿಂದ ಜ್ಯೂಸ್‌ ತಯಾರಿಸುವ ಯಂತ್ರಕ್ಕೆ ಬೆರಳುಗಳು ಸಿಲುಕಿ ನರಳುತ್ತಿದ್ದ ಕೂಲಿಕಾರ್ಮಿಕ ಯೂಸಫ್‌ನನ್ನು ಹೊರತೆಗೆಯಲು ಹರಸಾಹಸ ಪಟ್ಟ ಅಕ್ರಂ ಮತ್ತು ಇಮ್ರಾನ್‌.   

ಮಾಗಡಿ: ಕಬ್ಬಿನ ಜ್ಯೂಸ್‌ ತಯಾರಿಸುವ ಯಂತ್ರಕ್ಕೆ ಸಿಕ್ಕಿ ಕೂಲಿಕಾರ್ಮಿಕನ ಬಲಗೈಯ ನಾಲ್ಕು ಬೆರಳುಗಳು ಜಜ್ಜಿ ಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ನಟರಾಜ ಬಡಾವಣೆಯ ತಿರುಮಲೆ ರಸ್ತೆ ಬದಿ ಜ್ಯೂಸ್‌ ತಯಾರಿಸುವ ಯಂತ್ರಕ್ಕೆ ಕಬ್ಬಿನ ಜಲ್ಲೆಯೊಂದಿಗೆ ಬೆರಳುಗಳನ್ನು ತಳ್ಳಿದ ಕೂಲಿ ಕಾರ್ಮಿಕ ಬಿಹಾರ ಮೂಲಕ ಯೂಸುಫ್‌ (28) ಅವರ ಬೆರಳುಗಳು ಜಜ್ಜಿ ಹೋಗಿವೆ. ಪಕ್ಕದ ಬಡಾವಣೆಯಲ್ಲಿ ಮಂಜಪ್ಪ ಅವರ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎಲೆಕ್ಟ್ರಿಷಿಯನ್‌ಗಳಾದ ಅಕ್ರಮ್‌ ಮತ್ತು ಇಮ್ರಾನ್‌ ಗ್ಯಾಸ್‌ ಕಟ್ಟರ್‌ ಬಳಸಿ, ಕಭ್ಭಿನ ರಸ ತೆಗೆಯುವ ಯಂತ್ರದ ಭಾಗಗಳನ್ನು ಕತ್ತರಿಸಿ, ಕೂಲಿಕಾರ್ಮಿಕನನ್ನು ರಕ್ಷಿಸಿದರು.

ಸತತವಾಗಿ 2 ಗಂಟೆ ಕಾಲ ಈ ಕಾರ್ಯಾಚರಣೆ ನಡೆಯಿತು. ಯೂಸಫ್‌ ನೋವು ಸಹಿಸಲಾರದೆ ರೋದಿಸಿದರು. ಸಬ್‌ ಇನ್‌ಸ್ಪೆಕ್ಟರ್‌ ಟಿ.ವೆಂಕಟೇಶ್‌ ಮತ್ತು ಪೊಲೀಸ್‌ ಸಿಬ್ಬಂದಿ ಜನರನ್ನು ದೂರ ಸರಿಸಿದರು. ಆಂಬುಲೆನ್ಸ್‌ ತರಿಸಿ, ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು.

ADVERTISEMENT

ಡಾ.ಸವಿತಾ, ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ರಸ್ತಸ್ರಾವದಿಂದ ಬಳಲಿದ್ದಾರೆ. ಹೆಚ್ಚಿನ ಚಿಕಿತ್ಸೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.

ಆರೋಪ: ಪಟ್ಟಣದಲ್ಲಿ ರಸ್ತೆ ಬದಿ ಹತ್ತಾರು ಕಡೆಗಳಲ್ಲಿ ಕಬ್ಬಿನ ಜ್ಯೂಸ್‌ ತೆಗೆದು ಮಾರುವ ಘಟಕಗಳಿವೆ. ಮಾಲೀಕರು ಬೇರೆಡೆ ನೆಲೆಸಿದ್ದಾರೆ. ನಿತ್ಯ ಮುಂಜಾನೆ, ಜ್ಯೂಸ್‌ ಮಾಡುವ ಯಂತ್ರಗಳನ್ನು ಲಾರಿಯಲ್ಲಿ ತಂದು ನಿಲ್ಲಿಸಿ, ರಾತ್ರಿ ಕೊಂಡೊಯ್ಯುವುದು ವಾಡಿಕೆ. ಬಿಹಾರದಿಂದ ಬಂದಿರುವ ಕೂಲಿಕಾರ್ಮಿಕರನ್ನು ಕಡಿಮೆ ಕೂಲಿಗೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಹೋರಾಟಗಾರರಾದ ಕಲ್ಕೆರೆ ಶಿವಣ್ಣ, ದೊಡ್ಡಿಲಕ್ಷ್ಮಣ್‌ ಆರೋಪಿಸಿದರು.

ಮಾಹಿತಿ ಸಂಗ್ರಹಿಸಿ: ಕಟ್ಟಡ ನಿರ್ಮಾಣ, ಮೊಸಾಯಿಕ್‌ ನೆಲಹಾಸು , ಬಣ್ಣ ಬಳಿಯುವುದು, ಕಲ್ಲಿನ ಕ್ರಷರ್‌, ಒಳಚರಂಡಿ ಕಾಮಗಾರಿ, ಬೆಟ್ಟಗಳಿಂದ ಕಲ್ಲು ಕತ್ತರಿಸಿ ತೆಗೆಯುವುದು, ಕೋಳಿ ಸಾಕಾಣಿಕೆ ಕೇಂದ್ರ, ಇಟ್ಟಿಗೆ ಬಟ್ಟಿಗಳಲ್ಲಿ ಬಿಹಾರ, ಅಸ್ಸಾಂ, ತ್ರಿಪುರ, ತೆಲಂಗಾಣ, ತಮಿಳುನಾಡು, ಕೇರಳ, ಮದ್ಯಪ್ರದೇಶ ಇತರೆಡೆಗಳಿಂದ ಬಂದಿರುವ ನೂರಾರು ಕೂಲಿಕಾರ್ಮಿಕರು ತಾಲ್ಲೂಕಿನಲ್ಲಿ ನೆಲೆಸಿದ್ದಾರೆ. ಅವರ ಬಗ್ಗೆ ಗ್ರಾಮ‍ ಪಂಚಾಯಿತಿ, ಪುರಸಭೆಯಲ್ಲಿ ಮಾಹಿತಿ ಇಲ್ಲ. ತಾಲ್ಲೂಕು ಆಡಳಿತ ವಲಸೆ ಕೂಲಿಕಾರ್ಮಿಕರ ಮಾಹಿತಿ ಸಂಗ್ರಹಿಸಬೇಕು. ಅಮಾಯಕರು ಮೃತಪಟ್ಟಿರುವ ಘಟನೆಗಳು ನಡೆದಿವೆ ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.