ADVERTISEMENT

ಮಾಗಡಿ | ಶಾಸಕರದ್ದು ಎಫ್ಐಆರ್ ಸಂಸ್ಕೃತಿ: ಜೆಡಿಎಸ್‌ ಮುಖಂಡರ ಆರೋಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:36 IST
Last Updated 17 ಸೆಪ್ಟೆಂಬರ್ 2025, 2:36 IST
ಗಾಂಧಿ ಪುತ್ಥಳಿ ತೆರವು ಮಾಡದಂತೆ ಪ್ರತಿಭಟನೆ ಮಾಡಿದ್ದಕ್ಕೆ ಶಾಸಕ ಬಾಲಕೃಷ್ಣ ಅವರ ಎಫ್ಐಆರ್ ಹಾಕಿಸಿದ್ದಾರೆ ಎಂದು ಪತ್ರ ತೋರಿಸುತ್ತಿರುವ ಮಾಗಡಿ ಪುರಸಭೆ ಸದಸ್ಯ ಎಂ.ಎನ್.ಮಂಜು 
ಗಾಂಧಿ ಪುತ್ಥಳಿ ತೆರವು ಮಾಡದಂತೆ ಪ್ರತಿಭಟನೆ ಮಾಡಿದ್ದಕ್ಕೆ ಶಾಸಕ ಬಾಲಕೃಷ್ಣ ಅವರ ಎಫ್ಐಆರ್ ಹಾಕಿಸಿದ್ದಾರೆ ಎಂದು ಪತ್ರ ತೋರಿಸುತ್ತಿರುವ ಮಾಗಡಿ ಪುರಸಭೆ ಸದಸ್ಯ ಎಂ.ಎನ್.ಮಂಜು    

ಮಾಗಡಿ: ರಾಜಕೀಯ ವಿರೋಧಿಗಳ ಧೈರ್ಯ ಕುಂದಿಸಲು ವಿನಾಕಾರಣ ಎಫ್‌ಐಆರ್‌ ದಾಖಲಿಸುವ ಹಿಂದಿನ ಚಾಳಿಯನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಮುಂದುವರಿಸಿದ್ದಾರೆ. ಈಗ ಮತ್ತೆ ಎಫ್ಐಆರ್ ಸಂಸ್ಕೃತಿಯನ್ನು ತಾಲ್ಲೂಕಿನಲ್ಲಿ ಪರಿಚಯ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಎಂ.ಎನ್.ಮಂಜು ಆರೋಪಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಇಎಸ್ ವೃತ್ತದ ಬಳಿ ಸರ್ಕಲ್ ಅಭಿವೃದ್ಧಿ ನೆಪ ಮಾಡಿ ಮಾಜಿ ಶಾಸಕ ಎ.ಮಂಜುನಾಥ್ ಅವರು ನಿರ್ಮಾಣ ಮಾಡಿದ್ದ ಗಾಂಧಿ ಪುತ್ಥಳಿ ತೆರವು ಮಾಡಲು ಹೊರಟಾಗ 20 ದಿನ ನಂತರ ಗಾಂಧೀಜಿ ಜಯಂತಿ ಬರಲಿದೆ. ಅಲ್ಲಿವರೆಗೂ ಪುತ್ಥಳಿ ತೆರವು ಮಾಡದಂತೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿರುವ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಹೊರೆಸಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಶಾಸಕ ಬಾಲಕೃಷ್ಣ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿದರು. 

ಸಾಮಾನ್ಯ ಸಭೆಯಲ್ಲಿ ಶಾಸಕರು ತಮಗೆ ಬೇಕಾದ ರೀತಿ ನಡವಳಿಕೆ ಪುಸ್ತಕದಲ್ಲಿ ಬರೆದುಕೊಂಡು ತಮ್ಮ ಇಚ್ಛೆಯಂತೆ ನಡೆದುಕೊಳ್ಳುತ್ತಿದ್ದಾರೆ. ಸಭೆಯಲ್ಲಿ ನಡೆದ ವಿಷಯಗಳಿಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು. ಆದರೆ, ನಿಯಮ ಪಾಲಿಸುತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ದೂರು ದಾಖಲಿಸಲಾಗಿದೆ. ಕಾನೂನು ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಎಂ.ಎನ್.ಮಂಜುನಾಥ್ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ಕುಮಾರ್ ಹೇಳಿದರು.

ADVERTISEMENT

ಶಿಕ್ಷಕರ ದಿನಾಚರಣೆ ತಾಲ್ಲೂಕು ಆಡಳಿತದಿಂದ ಆಚರಿಸಲಾಗಿದೆ. ಶಾಸಕ ಬಾಲಕೃಷ್ಣ ಅವರ ಭಾವಚಿತ್ರ ಒಳಗೊಂಡಂತೆ ಕಾಂಗ್ರೆಸ್‌ ಹಲವು ಮುಖಂಡರು ಭಾವಚಿತ್ರ ಹಾಕಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ‌‌‌ ಡಾ.ಸಿ.ಎನ್.ಮಂಜುನಾಥ್ ಅವರ ಭಾವಚಿತ್ರ ಹಾಕದೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಮಾಡಬಾಳ್ ಕೆಂಪೇಗೌಡ ಇದೇ ಸಂದರ್ಭದಲ್ಲಿ ಆರೋಪಿಸಿದರು.

ಜೆಡಿಎಸ್‌ ಮುಖಂಡರಾದ ಕೆ.ವಿ.ಬಾಲು, ರಂಗಣಿ, ಪಂಚೆ ರಾಮಣ್ಣ, ಸಾಗರ್, ಬಾಲಕೃಷ್ಣ, ಮೂರ್ತಿ, ಕೆಂಪಸಾಗರ ಮಂಜುನಾಥ್, ಶಿವಕುಮಾರ್, ರೇವಣ್ಣ, ಗುಂಡ, ಕರಡಿ ನಾಗರಾಜು, ತಗ್ಗೀಕುಪ್ಪೆ ರವಿ, ನಯಜ್, ಉಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.