ADVERTISEMENT

ರಾಮನಗರ: ಮೀನು ಪ್ರಿಯರಿಗೆ ಬೆಲೆ ಏರಿಕೆ ಬಿಸಿ

ಸಮುದ್ರ ಮೀನುಗಾರಿಕೆ ನಿಷೇಧ ಪರಿಣಾಮ: ಸ್ಥಳೀಯ ಉತ್ಪನ್ನಕ್ಕೆ ಬೇಡಿಕೆ

ಆರ್.ಜಿತೇಂದ್ರ
Published 15 ಜುಲೈ 2019, 19:30 IST
Last Updated 15 ಜುಲೈ 2019, 19:30 IST
ರಾಮನಗರದ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟ ಮೀನುಗಳು
ರಾಮನಗರದ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟ ಮೀನುಗಳು   

ರಾಮನಗರ: ದಿನ ಕಳೆದಂತೆಲ್ಲ ಮೀನು ಪ್ರಿಯರ ಸಂಖ್ಯೆ ಹೆಚ್ಚುತ್ತಿದ್ದು, ಬೇಡಿಕೆಯೂ ವೃದ್ಧಿಯಾಗುತ್ತಿದೆ. ಆದರೆ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವ ಕಾರಣ ಬೆಲೆ ತುಟ್ಟಿಯಾಗಿದ್ದು, ಕೊಳ್ಳುವವರ ಜೇಬು ಖಾಲಿಯಾಗಿಸಿದೆ.

ಸದ್ಯ ರಾಮನಗರದ ಮೀನು ಮಾರುಕಟ್ಟೆಗೆ ಬೆಂಗಳೂರಿನಿಂದ ಮೀನು ಆಮದಾಗುತ್ತಿದೆ. ಮಳೆಗಾಲ ಮತ್ತು ಮೀನು ಸಂತಾನೋತ್ಪತ್ತಿಯ ಕಾರಣ ಕರಾವಳಿ ಉದ್ದಕ್ಕೂ ಸಮುದ್ರ ಮೀನುಗಾರಿಕೆಗೆ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಬಂಗುಡೆ, ಅಂಜಲ್, ಕಾಣೆ ಮೊದಲಾದ ಮೀನುಗಳು ಮಾರುಕಟ್ಟೆಯಿಂದ ನಾಪತ್ತೆಯಾಗಿವೆ. ಇದರಿಂದಾಗಿ ಹೊಳೆ ಮತ್ತು ಕೆರೆ ಮೀನುಗಳಿಗೆ ಬೇಡಿಕೆ ಕುದುರಿದೆ. ಬೆಲೆಯೂ ಕ್ರಮೇಣ ಏರಿಕೆಯಾಗುತ್ತಿದೆ. ಕಾಟ್ಲ, ರೋಹು, ರೂಪ್ ಚಂದ್‌ ತಳಿಯ ಮೀನುಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಪ್ರತಿ ಕೆ.ಜಿಗೆ ₨20–30–ರಷ್ಟು ಏರಿಕೆ ಕಂಡಿದೆ.

‘ಆಗಸ್ಟ್‌ವರೆಗೂ ಸಮುದ್ರದ ಮೀನು ಮಾರುಕಟ್ಟೆಗೆ ಬರುವುದಿಲ್ಲ. ಹೀಗಾಗಿ ಸ್ಥಳೀಯವಾಗಿ ಲಭ್ಯವಿರುವ ಮೀನುಗಳನ್ನೇ ತರಿಸುತ್ತಿದ್ದೇವೆ. ಆಂಧ್ರಪ್ರದೇಶ, ಕೇರಳ, ಮಂಗಳೂರು ಭಾಗದಿಂದ ಬೆಂಗಳೂರಿಗೆ ಮೀನು ಬರುತ್ತಿದ್ದು, ಅಲ್ಲಿಂದ ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದೇವೆ. ಸಾಗಣೆ ವೆಚ್ಚ ಹೆಚ್ಚಿರುವ ಕಾರಣ ಬೆಲೆಯೂ ಹೆಚ್ಚಿದೆ' ಎಂದು ರಾಮನಗರದ ಮೀನು ವರ್ತಕ ರಫೀಕ್‌ ಹೇಳುತ್ತಾರೆ.

ADVERTISEMENT

ಮೀನುಗಾರಿಕೆಗೆ 'ಬರ': ಈಚಿನ ದಿನಗಳಲ್ಲಿನ ಬರ ಪರಿಸ್ಥಿತಿಯಿಂದಾಗಿ ಸ್ಥಳೀಯವಾಗಿ ಮೀನು ಉತ್ಪಾದನೆಗೆ ಹೊಡೆತ ಬಿದ್ದಿದೆ.
ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಒಣಗಿವೆ. ಇದರಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಉತ್ಪಾದನೆ ಸಾಧ್ಯವಾಗಿಲ್ಲ. ಮರಿಗಳ ಬಿತ್ತನೆ ಆಗಿರುವ ಕಡೆಗಳಲ್ಲೂ ತೊಂದರೆ ಆಗಿದೆ. 2018-19ನೇ ಸಾಲಿನಲ್ಲಿ ಜಿಲ್ಲೆಯ ಕೆರೆಗಳಲ್ಲಿ 6222 ಟನ್‌ನಷ್ಟು ಮೀನು ಉತ್ಪಾದನೆ ಆಗಿರುವುದಾಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

‘ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಾಟ್ಲ, ರೋಹು, ಸಾಮಾನ್ಯಗೆಂಡೆ ತಳಿಯ ಮೀನುಗಳನ್ನು ಬೆಳೆಯಲಾಗುತ್ತಿದೆ. ನೆಲ್ಲಿಗುಡ್ಡ, ಕಣ್ವ, ಮಳೂರು ಸೇರಿದಂತೆ ದೊಡ್ಡ ಪ್ರಮಾಣದ ಕೆರೆಗಳಲ್ಲಿ ಮೀನುಗಾರಿಕೆ ಉತ್ತಮವಾಗಿ ನಡೆದಿದೆ. ಉಳಿದೆಡೆಯೂ ಟೆಂಡರ್ ಮೂಲಕ ಗುತ್ತಿಗೆದಾರರು ಮೀನು ಬಿತ್ತನೆ ಮಾಡಿದ್ದಾರೆ. ನೀರು ಇರುವ ಕಡೆ ಉತ್ಪಾದನೆ ಉತ್ತಮವಾಗಿದೆ. ಮಳೆ ಕೊರತೆಯ ಕಾರಣ ಕೆಲವು ಕೆರೆಗಳಲ್ಲಿ ಉತ್ಪಾದನೆ ಸಾಧ್ಯವಾಗಿಲ್ಲ. ಇದರಿಂದಾಗಿ ಒಟ್ಟಾರೆ ಪ್ರಮಾಣದಲ್ಲಿ ಏರುಪೇರಾಗಿದೆ. ಚನ್ನಪಟ್ಟಣದಲ್ಲಿ ಏತ ನೀರಾವರಿ ಯೋಜನೆಯಿಂದ ಕೆರೆಗಳು ತುಂಬಿರುವ ಕಡೆ ಹೆಚ್ಚು ಉತ್ಪಾದನೆ ಸಾಧ್ಯವಾಗಿದೆ' ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಮಯ್ಯ.

‘ಸ್ಥಳೀಯವಾಗಿ ಉತ್ಪಾದನೆ ಆಗುವ ಮೀನನ್ನು ಸ್ವಲ್ಪ ಮಟ್ಟಿಗೆ ಇಲ್ಲಿಯೇ ಬಳಸಲಾಗುತ್ತದೆ. ಉಳಿದ ಮೀನು ಬೆಂಗಳೂರು ಮಾರುಕಟ್ಟೆಗೆ ರವಾನೆ ಆಗುತ್ತಿದೆ. ಸದ್ಯ ಕಳೆದ ವರ್ಷದಲ್ಲಿ ಬಿತ್ತನೆ ಮಾಡಿದ್ದ ಮರಿಗಳು ಉಳಿದಿದ್ದು, ಅವುಗಳ ಕೊಯ್ಲು ನಡೆದಿದೆ’ ಎಂದು ಅವರು ತಿಳಿಸಿದರು.

ಮಳಿಗೆ ಸ್ಥಾಪನೆಗೆ ಒತ್ತಾಯ
ಮೀನುಗಾರಿಕೆ ಇಲಾಖೆಯು ಸ್ಥಳೀಯವಾಗಿ ಮಾರಾಟ ಮಳಿಗೆ ಆರಂಭಿಸಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಸದ್ಯ ಇಲ್ಲಿನ ಮೀನು ಮಾರಾಟವು ಸಂಪೂರ್ಣ ಖಾಸಗಿ ಹಿಡಿತದಲ್ಲಿ ಇದೆ. ಬೇರೆ ಜಿಲ್ಲೆಗಳಲ್ಲಿ ಇಲಾಖೆಯ ಮಾರಾಟ ಮಳಿಗೆಗಳು ಇವೆ. ಆದರೆ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಮಳಿಗೆ ಸ್ಥಾಪನೆ ಸಾಧ್ಯವಾಗಿಲ್ಲ. ಇಲಾಖೆಯಿಂದ ಅದಕ್ಕೆ ಅವಕಾಶ ನೀಡಿದರೆ ಮಾರುಕಟ್ಟೆಯಲ್ಲಿನ ಪೈಪೋಟಿಯಿಂದಾಗಿ ಬೆಲೆ ನಿಯಂತ್ರಣದಲ್ಲಿ ಇರುತ್ತದೆ. ಗುಣಮಟ್ಟದ ತಾಜಾ ಮೀನು ದೊರೆಯುತ್ತದೆ ಎನ್ನುವುದು ಗ್ರಾಹಕರ ಅಭಿಪ್ರಾಯವಾಗಿದೆ.

*
ಕೆರೆಗಳಲ್ಲಿ ನೀರಿನ ಲಭ್ಯತೆ ಮೇಲೆ ಸ್ಥಳೀಯವಾಗಿ ಮೀನು ಉತ್ಪಾದನೆ ಅವಲಂಬಿತವಾಗಿದೆ. ಕೆರೆಗಳು ತುಂಬಿರುವ ಕಡೆ ಮೀನು ಕೊಯ್ಲು ಉತ್ತಮವಾಗಿದೆ.
-ಜಯರಾಮಯ್ಯ,ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

ರಾಮನಗರ ಮಾರುಕಟ್ಟೆ ಮೀನು ದರ (ಪ್ರತಿ ಕೆ.ಜಿ.ಗೆ– ₹ ಗಳಲ್ಲಿ)
ಜಿಲೇಬಿ- 100
ಕಾಟ್ಲ (ಸಣ್ಣದು)-120
ಕಾಟ್ಲ (ದೊಡ್ಡದು)–160
ರೋಹು- 160
ರೂಪ್ ಚಂದ್‌- 180

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.