ADVERTISEMENT

ಹೂವಿನಲ್ಲಿ ಅರಳಲಿದೆ ರಂಗನಾಥ ದೇಗುಲ

ಮೂರು ದಿನ ಕಾಲ ಜೂ. ಕಾಲೇಜು ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 12:31 IST
Last Updated 24 ಜನವರಿ 2020, 12:31 IST
ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಫಲಪುಷ್ಪ ಪ್ರದರ್ಶನದ ಸಿದ್ಧತೆ ನಡೆದಿತ್ತು
ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಫಲಪುಷ್ಪ ಪ್ರದರ್ಶನದ ಸಿದ್ಧತೆ ನಡೆದಿತ್ತು   

ರಾಮನಗರ: ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಇದೇ 26ರಂದು ಫಲಪುಷ್ಪ ಪ್ರದರ್ಶನ ಮೇಳಕ್ಕೆ ಚಾಲನೆ ದೊರೆಯಲಿದೆ. 28ರವರೆಗೂ ಪ್ರದರ್ಶನ ಇರಲಿದ್ದು, ಮಾಗಡಿ ತಾಲ್ಲೂಕಿನ ತಿರುಮಲೆ ರಂಗನಾಥಸ್ವಾಮಿ ದೇವಸ್ಥಾನದ ಕಲಾಕೃತಿಯು ಈ ಬಾರಿಯ ಮೇಳದ ಆಕರ್ಷಣೆ ಆಗಲಿದೆ.

ಪ್ರದರ್ಶನಕ್ಕಾಗಿ ಕೈಗೊಂಡ ಸಿದ್ಧತೆಗಳ ಕುರಿತು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜೆ. ಗುಣವಂತ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಗಣರಾಜ್ಯೋತ್ಸವದ ಅಂಗವಾಗಿ ಇಲಾಖೆಯು ಜಿಲ್ಲಾ ಪಂಚಾಯಿತಿ ಕೃಷಿ ಇಲಾಖೆ, ತೋಟಗಾರಿಕೆ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಫಲಪುಷ್ಪ ಪ್ರದರ್ಶನ ಹಾಗೂ ಸುಗ್ಗಿ ಉತ್ಸವವನ್ನು ಆಯೋಜಿಸುತ್ತ ಬಂದಿದೆ. 26ರಂದು ಬೆಳಿಗ್ಗೆ 10.30ಕ್ಕೆ ಪ್ರದರ್ಶನಕ್ಕೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಚಾಲನೆ ನೀಡಲಿದ್ದಾರೆ’ ಎಂದರು.

ರಂಗನಾಥ ದೇಗುಲದ ಕಲಾಕೃತಿ ಈ ಬಾರಿಯ ಆಕರ್ಷಣೆ. ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಈ ದೇಗುಲದ ಮಾದರಿಯನ್ನು ಅಲಂಕರಿಸಲಾಗುತ್ತದೆ. ಇದಲ್ಲದೆ ಬಗೆಬಗೆಯ ಹೂವುಗಳಿಂದ ಅಲಂಕರಿಸಿದ ಬಟರ್‌ಫ್ಲೈ, ಜಿರಾಫೆ, ಹಂಸ, ಪೆಂಗ್ವಿನ್‌, ನವಿಲು ಇತರೆ ಆಕೃತಿಗಳು ಸೆಳೆಯಲಿವೆ. ಜೊತೆಗೆ ರೇಷ್ಮೆ ಕೃಷಿಯನ್ನು ಬಿಂಬಿಸುವ ಚಿತ್ರಣ, ಬಣ್ಣದ ಮೆಣಸಿನಕಾಯಿಂದ ಅಲಂಕರಿಸಿದ ಹಳ್ಳಿ ಮನೆ, ಹೈಡ್ರೋಫೋನಿಕ್‌ ಕೃಷಿ ಪ್ರದರ್ಶನಗಳು ಗಮನ ಸೆಳೆಯಲಿವೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಂತ್ರಿಕ ಮಾಹಿತಿ: ತೋಟಗಾರಿಕೆ, ಕೃಷಿ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆಗಳು ತಮ್ಮಲ್ಲಿನ ತಾಂತ್ರಿಕತೆಯ ಮಾಹಿತಿಯನ್ನು ಪ್ರದರ್ಶನ, ಪ್ರಾತ್ಯಕ್ಷಿಕೆಗಳ ಮೂಲಕ ಮೇಳದಲ್ಲಿ ಆಸಕ್ತರೊಡನೆ ಹಂಚಿಕೊಳ್ಳಲಿವೆ. ಅಣಬೆ ಕೃಷಿ, ಜೇನು ಸಾಕಣೆ, ಕೈತೋಟ ಮತ್ತು ತಾರಸಿ ತೋಟಗಳ ನಿರ್ವಹಣೆ, ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳು ಇರಲಿವೆ. ಜೊತೆಗೆ ಸಿರಿಧಾನ್ಯ ಮೇಳ, ದ್ರಾಕ್ಷರಸ ಮಂಡಳಿಯಿಂದ ವೈನ್‌ ಪ್ರಾತ್ಯಕ್ಷಿಕೆ ಸಹ ಇರಲಿದೆ ಎಂದು ವಿವರಿಸಿದರು.

ತೆಂಗು ಅಭಿವೃದ್ಧಿ ಮಂಡಳಿಯು ತೆಂಗು ಬೆಳೆಯ ರೋಗಬಾಧೆಯ ನಿರ್ವಹಣೆ ಕುರಿತು ಕಾರ್ಯಾಗಾರ ನಡೆಸಲಿದೆ. ಮಾವಿನ ಸುಧಾರಿತ ಬೇಸಾಯ ಕ್ರಮ, ರೋಗ ನಿರ್ವಹಣೆ, ಕೊಯ್ಲು, ಹಣ್ಣು ಮಾಗಿಸುವಿಕೆ ಮೊದಲಾದ ವಿಷಯಗಳ ಕುರಿತು ಕಾರ್ಯಾಗಾರ ಇರಲಿದೆ. ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೃಷಿ ವಿ.ವಿ.ಯ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಕೈ ತೋಟದ ಪ್ರಾಮುಖ್ಯತೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಮೊದಲೆರಡು ದಿನ ಮೇಳದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಸಂಜೆ ಜತಿನ್‌ ಅಕಾಡೆಮಿ ಆಫ್‌ ಡ್ಯಾನ್ಸ್‌ನ ಕಲಾವಿದರು ಭರತನಾಟ್ಯ, ಕೂಚುಪುಡಿ, ಸಮೂಹ ನೃತ್ಯ ಪ್ರದರ್ಶನ ನೀಡಲಿದ್ದಾರೆ. 27ರಂದು ಸಂಜೆ 6ಕ್ಕೆ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.


70 ಮಳಿಗೆಗಳಲ್ಲಿ ಮಾಹಿತಿ
ಕಳೆದ ವರ್ಷಕ್ಕಿಂತ ಈ ವರ್ಷ ಮಳಿಗೆಗಳ ಸಂಖ್ಯೆ ಹೆಚ್ಚಾಗಲಿದೆ. ಈಗಾಗಲೇ 62 ಮಳಿಗೆಗಳನ್ನು ಆಸಕ್ತರು ಕಾಯ್ದಿರಿಸಿದ್ದಾರೆ. ಜಿಲ್ಲೆಯ ಪ್ರಗತಿಪರ ಬೆಳೆಗಾರರು, ಕೃಷಿ ಉತ್ಪನ್ನಗಳ ಉತ್ಪಾದಕರು ಆಸಕ್ತಿ ತೋರಿದ್ದಾರೆ. ಕೃಷಿ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಕುರಿ, ಕೋಳಿ, ಮೇಕೆ, ಜಾನುವಾರಗಳ ಪ್ರದರ್ಶನವೂ ಇರಲಿದೆ. ಇದಲ್ಲದೆ ವಿವಿಧ ಇಲಾಖೆಗಳಿಂದ ಮಾಹಿತಿ ಪ್ರದರ್ಶನವೂ ಇರಲಿದೆ. 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುವುದು ಎಂದು ಗುಣವಂತ ಮಾಹಿತಿ ನೀಡಿದರು.

ಸಸ್ಯ ಸಂತೆ, ಆರೋಗ್ಯ ಶಿಬಿರ
ತೋಟಗಾರಿಕೆ ಇಲಾಖೆಯು ಜಿಲ್ಲೆಯಲ್ಲಿನ 10 ಸಸ್ಯಕ್ಷೇತ್ರಗಳಲ್ಲಿ ಬೆಳೆದ ವಿವಿಧ ಬಗೆಯ ಸಸಿಗಳನ್ನು ಮೇಳದಲ್ಲಿ ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಿದೆ. ಇದಲ್ಲದೆ, ಮೇಳಕ್ಕೆ ಬರುವ ಜನರ ಆರೋಗ್ಯ ತಪಾಸಣೆಯೂ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್‌ ಇಲಾಖೆಗಳ ವೈದ್ಯರು ಜನರ ಆರೋಗ್ಯ ಪರೀಕ್ಷೆ ನಡೆಸಲಿದ್ದಾರೆ.


ಮೂರು ದಿನಗಳ ಕಾಲ ಮೇಳ ನಡೆಯಲಿದ್ದು, ಜನರಿಗೆ ಉಚಿತ ಪ್ರವೇಶವಿದೆ. ರೈತರಿಗೆ ಅನುಕೂಲ ಆಗುವಂತೆ ವಿವಿಧ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು
-ಜೆ. ಗುಣವಂತ
ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.