ADVERTISEMENT

‘ಜನಪದ ಸೊಗಡು ಹೊದ್ದ ಸಾಹಿತ್ಯ‘

ಚಂದ್ರಶೇಖರ ಕಂಬಾರ ಕುರಿತು ವಿಶೇಷ ಉಪನ್ಯಾಸದಲ್ಲಿ ಎಚ್.ಪಿ. ಮಂಜುನಾಥ ಕುಣಿಗಲ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 13:23 IST
Last Updated 20 ಫೆಬ್ರುವರಿ 2019, 13:23 IST
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರ ಕುರಿತು ವಿಶೇಷ ಉಪನ್ಯಾಸ ಮಾಲೆಯಲ್ಲಿ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ.
ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರ ಕುರಿತು ವಿಶೇಷ ಉಪನ್ಯಾಸ ಮಾಲೆಯಲ್ಲಿ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಇತಿಹಾಸ ಸಂಶೋಧಕ ಡಾ.ಮುನಿರಾಜಪ್ಪ.   

ಮಾಗಡಿ: ಬೇಂದ್ರೆ ನಂತರ ಉತ್ತರ ಕರ್ನಾಟಕದ ಭಾಷೆ ಸೊಗಡನ್ನು ಅತ್ಯಂತ ಪರಿಣಾಮಕಾರಿಯಾಗಿ ದುಡಿಸಿಕೊಂಡವರು ಚಂದ್ರಶೇಖರ ಕಂಬಾರರು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಲೇಖಕ ಎಚ್.ಪಿ. ಮಂಜುನಾಥ ಕುಣಿಗಲ್ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹೃದಯ ಬಳಗ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತುಗಳ ಸಹಯೋಗದಲ್ಲಿ ನಡೆದ ‘ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಬದುಕು- ಬರಹ- ಚಿಂತನಮಾಲೆ’ ಸಮಾರೋಪ ಸಮಾರಂಭದಲ್ಲಿ ‘ಚಂದ್ರಶೇಖರ ಕಂಬಾರ ಕುರಿತು ವಿಶೇಷ ಉಪನ್ಯಾಸ’ ನೀಡಿದರು.

ಕುವೆಂಪು, ಮಧುರಚೆನ್ನ ಕವಿಗಳ ಪ್ರಭಾವವನ್ನು ಕಂಬಾರರ ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಕನ್ನಡ ರಂಗಭೂಮಿಯ ‘ಋಷ್ಯಶೃಂಗ’ ಎಂದು ಬಿ.ವಿ. ಕಾರಂತರು ಕಂಬಾರರನ್ನು ಕರೆದಿದ್ದಾರೆ. ಅವರು ರಚಿಸಿರುವ ಜೋಕುಮಾರಸ್ವಾಮಿ ನಾಟಕ ಹಲವು ಭಾಷೆಗಳಿಗೆ ಅನುವಾದಗೊಂಡಿದೆ ಎಂದು ವಿವರಿಸಿದರು.

ADVERTISEMENT

ಹೆಣ್ಣು ಗಂಡಿನ ಪ್ರಣಯ ವ್ಯಾಪಾರವನ್ನೇ ವಸ್ತುವನ್ನಾಗಿಸಿಕೊಂಡ ಅವರ ‘ಕಾಡು ಕುದುರೆ ಓಡಿಬಂದಿತ್ತಾ..’ ಹಾಡನ್ನು ಪ್ರಸಿದ್ಧಿ ಪಡೆದಿತ್ತು. ಅವರು ಸಮಾಜದ ವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಶೋಷಣೆಯ ವಿರುದ್ಧ ಸಿಡಿದೇಳುವ ಬಂಡಾಯದ ಧ್ವನಿಯನ್ನು ಮತ್ತು ಜನಪದ ಸೊಗಡನ್ನು ತಮ್ಮ ಬರವಣಿಗೆಯ ದ್ರವ್ಯವನ್ನಾಗಿಸಿಕೊಂಡು ಸಾಹಿತ್ಯ ರಚಿಸಿದ್ದಾರೆ. ಯುವಕರು ಕಂಬಾರರ ಕೃತಿಗಳನ್ನು ಅಧ್ಯಯನ ಮಾಡಬೇಕು ಎಂದರು.

ಕನ್ನಡ ಸಹೃದಯ ಬಳಗದ ಅಧ್ಯಕ್ಷ ಡಾ. ಮುನಿರಾಜಪ್ಪ ಮಾತನಾಡಿ, ಸಾಹಿತ್ಯ ಪರಿಚಯ ಮಾಡಿಕೊಡುವ ಉದ್ದೇಶದಿಂದ ಚಿಂತನಮಾಲೆ ಆಯೋಜಿಸಲಾಗಿದೆ. ಸಾಹಿತಿ ಮತ್ತು ಕಲಾವಿದರು ನಾಡಿನ ಅಮೂಲ್ಯವಾದ ಸಂಪತ್ತು ಎಂಬುದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ. ಉಗ್ರಗಾಮಿಗಳು ಸಾಹಿತ್ಯ ಕೃತಿಗಳನ್ನು ಓದಿಕೊಂಡಿದ್ದರೆ, ಅಕ್ಕತಂಗಿಯರ ಜತೆಗೆ ಬೆಳೆದಿದ್ದರೆ ಈ ದುಷ್ಕೃತ್ಯ ಮಾಡುತ್ತಿರಲಿಲ್ಲ. ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿ ಮಾನವಂತ ನಡವಳಿಕೆ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಿರಿಯ ಲೇಖಕ ಡಿ.ರಾಮಚಂದ್ರಯ್ಯ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಲೇಖಕಿ ವಸಂತ ಲಕ್ಷ್ಮೀಸುರೇಂದ್ರ ನಾಥ್, ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಪಿ. ನಂಜುಂಡ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಎಸ್.ಮಂಜುನಾಥ ಮಾತನಾಡಿದರು.

ಪ್ರಾಂಶುಪಾಲ ಪ್ರೊ.ಎಚ್.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಹೃದಯ ಬಳಗದ ಕಾರ್ಯದರ್ಶಿ ದೊಡ್ಡಬಾಣಗೆರೆ ಮಾರಣ್ಣ, ಮುಖ್ಯಶಿಕ್ಷಕ ಪುಟ್ಟಸ್ವಾಮಯ್ಯ, ಶಿಕ್ಷಕಿ ಶಹನಾಜ್, ಪ್ರೊ.ಚೆಲುವರಾಜು, ಪ್ರೊ.ಶ್ರೀಧರ್, ಪ್ರೊ. ಜಗದೀಶ್ ನಡುವಿನಮಠ , ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.