ADVERTISEMENT

ಸಂಕಷ್ಟದಲ್ಲಿ ಚಮ್ಮಾರಿಕೆ ವೃತ್ತಿ ಬದುಕು, ಇತರ ವೃತ್ತಿಗಳ ಅವಲಂಬನೆ

ಹಲವು ಸಾಂಪ್ರದಾಯಿಕ ವೃತ್ತಿಗಳು ತೆರೆಮರೆಗೆ

ಎಸ್.ರುದ್ರೇಶ್ವರ
Published 30 ಸೆಪ್ಟೆಂಬರ್ 2018, 19:45 IST
Last Updated 30 ಸೆಪ್ಟೆಂಬರ್ 2018, 19:45 IST
ಐಜೂರು ವೃತ್ತದಲ್ಲಿ ಚಪ್ಪಲಿ ರಿಪೇರಿ ಮಾಡುತ್ತಿರುವ ಮರಿಸಿದ್ದ
ಐಜೂರು ವೃತ್ತದಲ್ಲಿ ಚಪ್ಪಲಿ ರಿಪೇರಿ ಮಾಡುತ್ತಿರುವ ಮರಿಸಿದ್ದ   

ರಾಮನಗರ: ಇಂದು ಎಲ್ಲ ಕ್ಷೇತ್ರಗಳ ಮೇಲೆ ಆಧುನಿಕತೆ ತನ್ನ ಪ್ರಭಾವ ಬೀರಿದ್ದು ಸಾಂಪ್ರದಾಯಿಕ ವೃತ್ತಿ, ಕಲೆಗಳ ಮೇಲೆ ತನ್ನ ಅಧಿಪತ್ಯ ಸಾಧಿಸಿದೆ. ಇದರಿಂದ ಸಾಂಪ್ರದಾಯಿಕ ವೃತ್ತಿಯನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳಲು ಇತರ ವೃತ್ತಿ ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹಲವು ಸಾಂಪ್ರದಾಯಿಕ ವೃತ್ತಿಗಳು ತೆರೆಮರೆಗೆ ಸರಿದ್ದಿದ್ದು, ಚಮ್ಮಾರ ವೃತ್ತಿಯೂ ಆಧುನಿಕತೆಯ ದಾಳಿಗೆ ಸಿಲುಕಿದೆ. ಚಮ್ಮಾರಿಕೆಯನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ಬಹುತೇಕ ಚಮ್ಮಾರ ಕುಟುಂಬಗಳು ಕಣ್ಮರೆಯಾಗುತ್ತಿವೆ.

ಆದರೆ, ಸಾಂಪ್ರದಾಯಿಕ ವೃತ್ತಿ ಬಿಟ್ಟು ಬೇರೆ ವೃತ್ತಿ ತಿಳಿಯದ ಕುಟುಂಬಗಳು ಮಾತ್ರ ಇಂದಿಗೂ ಚಮ್ಮಾರಿಕೆಯನ್ನೇ ನೆಚ್ಚಿಕೊಂಡಿದ್ದು ನಗರದ ಮುಖ್ಯ ಸ್ಥಳಗಳಲ್ಲಿ, ಮರದ ನೆರಳಿನಲ್ಲಿ ತಮ್ಮ ವೃತ್ತಿ ಮುಂದುವರಿಸಿವೆ. ಇಲ್ಲಿನ ಐಜೂರು ವೃತ್ತ, ಹಳೆ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ ಮತ್ತಿತರ ಕಡೆ ಚಿಕ್ಕ ಗೂಡಂಗಡಿಗಳಲ್ಲೋ, ಮರದ ನೆರಳಿನಲ್ಲಿ ವ್ಯಾಪಾರ ನಡೆಸುತ್ತಾರೆ.

ADVERTISEMENT

ಚಪ್ಪಲಿ ತಯಾರಿಕೆ ಕಾರ್ಖಾನೆಗಳು ಬಂದ ಮೇಲೆ ಸಾಂಪ್ರದಾಯಿಕವಾಗಿ ಚಪ್ಪಲಿ ತಯಾರಿಸುತ್ತಿದ್ದ ಚಮ್ಮಾರರಿಗೆ ಕೆಲಸವಿಲ್ಲದಾಗಿದೆ. ಚಪ್ಪಲಿ ಮಾರಾಟಗಾಗರರು ನೇರವಾಗಿ ಕಾರ್ಖಾನೆಗಳಿಂದಲೇ ಚಪ್ಪಲಿ ಖರೀದಿಸುವ ಕಾರಣ, ಚಮ್ಮಾರರಿಂದ ಖರೀದಿಸುವವರು ಕಡಿಮೆಯಾಗಿದಾರೆ. ಹೀಗಾಗಿ ಅವರ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಕಷ್ಟವಾಗಿದೆ. ಚಪ್ಪಲಿ ತಯಾರಿಕೆಯನ್ನು ಚಪ್ಪಲಿ ರಿಪೇರಿ ಮಾರಾಟಕ್ಕೆ ಮಾರ್ಪಡಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ನಗರದಲ್ಲಿ ಚಮ್ಮಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿದ್ದ 150ಕ್ಕೂ ಹೆಚ್ಚು ಚಮ್ಮಾರರ ಕುಟುಂಬಗಳು ಇದ್ದವು. ಈಗ ಆ ಕುಟುಂಬಗಳ ಸಂಖ್ಯೆ 25ರ ಆಸುಪಾಸಿಗೆ ಬಂದು ನಿಂತಿವೆ. ಈಗ ಬೆರಳೆಣಿಕೆಯಷ್ಟು ಹಳೆ ತಲೆಮಾರಿನ ಮಂದಿ ಮಾತ್ರ ಈ ವೃತ್ತಿ ಕೈಗೊಂಡಿದ್ದಾರೆ. ದಿನದಲ್ಲಿ ₹100 ರಿಂದ ₹150 ಲಾಭ ಸಿಗುವುದು ಕಷ್ಟವಾಗಿದೆ. ಬೇರೆ ವೃತ್ತಿ ಅರಿಯದ ಕಾರಣ ಇದನ್ನೇ ನೆಚ್ಚಿಕೊಂಡಿದ್ದೇವೆ ಎನ್ನುತ್ತಾರೆ ಮರಿಸಿದ್ದ. ತಾತಾ, ಅಪ್ಪ ಎಲ್ಲರೂ ಇದನ್ನೇ ನಂಬಿದ್ದರು. ಹೀಗಾಗಿ ಇದೇ ವೃತ್ತಿ ಮುಂದುವರೆಸಿದ್ದೇನೆ ಎನ್ನುತ್ತಾರೆ ಅವರು.

ಸರ್ಕಾರ ಚಮ್ಮಾರರಿಗೆ ಸ್ವಯಂ ವೃತ್ತಿ ಕೈಗೊಳ್ಳಲು, ಗೂಡಂಗಡಿ ತೆರೆಯಲು ಸಾಲ ಸೌಲಭ್ಯ ನೀಡುತ್ತಿದೆ. ಆದರೆ, ಅನಕ್ಷರಸ್ಥರಾಗಿರುವ ಕಾರಣ ಅದರ ಮಾಹಿತಿ ಸಿಗುವುದಿಲ್ಲ. ಸರ್ಕಾರದ ಸೌಲಭ್ಯ ಮರೀಚಿಕೆಯಾಗಿದೆ ಎಂದು ಅವರು ಹೇಳುತ್ತಾರೆ.

ಜೀವನ ನಡೆಸಲು ಚಪ್ಪಲಿ ತಯಾರಿಕೆ ಬಿಟ್ಟು ಚಪ್ಪಲಿ ರಿಪೇರಿ ಕೈಗೊಂಡಿದ್ದು, ಇದರಿಂದಲೂ ಹೆಚ್ಚಿನ ಲಾಭ ನಿರೀಕ್ಷಿಸುವಂತಿಲ್ಲ. ನಗರ ವ್ಯಾಪ್ತಿಯಲ್ಲಿ ಮೊದಲು 15 ರಿಂದ 20 ಚಪ್ಪಲಿ ರಿಪೇರಿ ಮಾಡುವ ಅಂಗಡಿಗಳಿದ್ದವು. ಈಗ ನಾಲ್ಕು ಅಂಗಡಿಗಳು ಮಾತ್ರ ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.