
ಚನ್ನಪಟ್ಟಣ: ತಾಲ್ಲೂಕಿನ ಪ್ರಾದೇಶಿಕ ಅರಣ್ಯ ವಲಯದ ಅಬ್ಬೂರು ಸೆಕ್ಷನ್ ಅರಣ್ಯ, ಅಬ್ಬೂರು ಗುಡ್ಡೆಯ ಪಟ್ಲು ಹಾಗೂ ಕೋಮನಹಳ್ಳಿ ಭಾಗದಲ್ಲಿ ಭಾನುವಾರ ಕಾಣಿಸಿಕೊಂಡಿದ್ದ ಬೆಂಕಿಯಿಂದಾಗಿ ಸುಮಾರು 30 ಎಕರೆ ಪ್ರದೇಶವು ಸುಟ್ಟು ಭಸ್ಮವಾಗಿದೆ.
ವರ್ಷಾರಂಭದಲ್ಲಿ ಸಂಭವಿಸಿರುವ ಈ ಕಾಳ್ಗಿಚ್ಚು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಕಾಳ್ಗಿಚ್ಚಿನಲ್ಲೇ ಅತಿ ದೊಡ್ಡದು ಎನ್ನಲಾಗಿದೆ.
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ಗೆ ಹೊಂದಿಕೊಂಡಂತಿರುವ ಕಾಡಿನಲ್ಲಿ ಮಧ್ಯಾಹ್ನದಿಂದಲೇ ಬೆಂಕಿಯ ಹೊಗೆ ಕಾಣಿಸಿಕೊಂಡಿತ್ತು.
ಸಂಜೆಯಾಗುತ್ತಿದ್ದಂತೆ ಕಾಳ್ಗಿಚ್ಚಿನ ತೀವ್ರತೆ ಹೆಚ್ಚಾಗಿತ್ತು. ರಾತ್ರಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್‌ಗಳಲ್ಲಿ ಬೆಂಕಿಯ ಚಿತ್ರ ಮತ್ತು ವಿಡಿಯೊ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಮಧ್ಯರಾತ್ರಿವರೆಗೆ ಕಾರ್ಯಾಚರಣೆ: ‘ಕುರುಚಲು ಕಾಡಿನ ಅರಣ್ಯ ಪ್ರದೇಶದಲ್ಲಿದ್ದ ಸಣ್ಣಪುಟ್ಟ ಗಿಡ–ಮರಗಳು ಹಾಗೂ ಹುಲ್ಲು ಸುಟ್ಟು ಹೋಗಿವೆ. ಸಂಜೆಯಿಂದ ಮಧ್ಯರಾತ್ರಿವರೆಗೆ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದೇವೆ’ ಎಂದು ಚನ್ನಪಟ್ಟಣದ ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.
ಮೊದಲಿಗೆ ಅಬ್ಬೂರು ಸೆಕ್ಷನ್ ಅರಣ್ಯದಲ್ಲಿ ಮಧ್ಯಾಹ್ನ ಕಾಣಿಸಿಕೊಂಡ ಬೆಂಕಿ, ಆನಂತರ ಪಟ್ಲು ಹಾಗೂ ಕೋಮನಹಳ್ಳಿ ಭಾಗಕ್ಕೆ ವ್ಯಾಪಿಸಿದೆ. ಎರಡೂ ಇಲಾಖೆಯ ಮೂರು ತಂಡಗಳು ರಾತ್ರಿ 12ರವರೆಗೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದವು ಎಂದು ಹೇಳಿದ್ದಾರೆ.
ಬೆಂಕಿ ಹಚ್ಚಿರುವ ಸಾಧ್ಯತೆ: ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡಿರುವ ಸಾಧ್ಯತೆ ಕಡಿಮೆ. ಬೆಟ್ಟದಲ್ಲಿರುವ ಒಣಹುಲ್ಲು ಸುಟ್ಟುಹೋದರೆ ಹೊಸ ಹುಲ್ಲು ಬರುತ್ತದೆ ಎನ್ನುವ ಕಾರಣಕ್ಕೆ ಕೆಲವರು ಬೆಂಕಿ ಹಚ್ಚಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಮಲ್ಲೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಟ್ಟಗಳಿಗೆ ಬೆಂಕಿ ಹಚ್ಚುವುದರಿಂದ ಅಲ್ಲಿರುವ ಅರಣ್ಯ ಸಂಪತ್ತು, ಪ್ರಾಣಿ ಸಂಕುಲಕ್ಕೆ ಹಾನಿಯಾಗುತ್ತದೆ ಎಂಬುದನ್ನು ಬೆಂಕಿ ಹಚ್ಚುವವರು ಅರಿತುಕೊಳ್ಳಬೇಕು. ಬೆಟ್ಟಗಳಿಗೆ ಬೆಂಕಿ ಬಿದ್ದಿರುವುದು ತಿಳಿದುಬಂದರೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಅಥವಾ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಆ ಮೂಲಕ ಅರಣ್ಯ ಸಂಪತ್ತು ರಕ್ಷಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.