ADVERTISEMENT

ಕಾಳ್ಗಿಚ್ಚಿನಿಂದ ಅರಣ್ಯ ರಕ್ಷಣೆ: ವನದೇವಿ ಮೊರೆ ಹೋದ ಅರಣ್ಯಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:16 IST
Last Updated 14 ಡಿಸೆಂಬರ್ 2025, 6:16 IST
   

ಕನಕಪುರ: ಬೇಸಿಗೆಯಲ್ಲಿ ಅರಣ್ಯ ಹಾಗೂ ವನ್ಯಜೀವಿಗಳನ್ನು ಕಾಳ್ಗಿಚ್ಚಿನಿಂದ ಕಾಪಾಡುವಂತೆ ಇಲ್ಲಿಯ ಅರಣ್ಯ ಇಲಾಖೆ ಅಧಿಕಾರಿಗಳು ವನದೇವಿಯ ಮೊರೆ ಹೋದರು.

ತಾಲ್ಲೂಕಿನ ಸಾತನೂರು ಹೋಬಳಿ ಚೂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಣಂತ ಮಾರಮ್ಮ ಬೆಟ್ಟದಲ್ಲಿ ಬಾಣಂತ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಪೂಜೆ ಸಲ್ಲಿಸಿ ಮಾತನಾಡಿದ ಆರ್‌ಎಫ್ಒ ರವಿ, ಜನಸಂಖ್ಯೆಗೆ ಅನುಗುಣವಾಗಿ ಮರ,ಗಿಡಗಳಿರಬೇಕು. ಅರಣ್ಯ ಪ್ರದೇಶವಿರಬೇಕು. ಕಾಡು ಪ್ರಾಣಿಗಳಿರಬೇಕು. ಯಾವುದೂ ನಾಶ ಆಗಬಾರದು. ಬಾಣಂತ ಮಾರಮ್ಮ ಬೆಟ್ಟದಲ್ಲಿ ಅರಣ್ಯ ಇಲಾಖೆ ಬಿದಿರನ್ನು ಹೇರಳವಾಗಿ ಬೆಳೆಸಿದೆ. ಕಾಡು ಪ್ರಾಣಿ ಮತ್ತು ಕಾಡಾನೆಗಳು ನಿರಾತಂಕವಾಗಿ ನೆಲೆಸಿವೆ ಎಂದರು.

ADVERTISEMENT

ವೈವಿಧ್ಯಮಯ ವನ ಸಂಪತ್ತಿನಿಂದ ಕೂಡಿದ ಅರಣ್ಯವನ್ನು ಬೇಸಿಗೆಯಲ್ಲಿ ಕಾಳ್ಗಿಚ್ಚಿನಿಂದ ರಕ್ಷಿಸುವಂತೆ ವನದೇವಿ ಬಾಣಂತ ಮಾರಮ್ಮನನ್ನು ಕೋರಲಾಯಿತು. ವನ ಸಂಪತ್ತನ್ನು ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು. ಕಾಡಿನ ರಕ್ಷಣೆಗೆ ಸಾರ್ವಜನಿಕರು ಅರಣ್ಯ ಇಲಾಖೆ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನಾಡು ಎಷ್ಟು ಮುಖ್ಯವೋ ಕಾಡು ಅಷ್ಟೇ ಮುಖ್ಯ. ಸಮೃದ್ಧವಾದ ಕಾಡು ಮತ್ತು ವನ್ಯಜೀವಿಗಳಿದ್ದರೆ ಪರಿಸರ ಸಮತೋಲನವಾಗಿರುತ್ತದೆ. ಉತ್ತಮ ಮಳೆ ಆಗುತ್ತದೆ. ಶುದ್ಧ ಗಾಳಿ ದೊರೆಯುತ್ತದೆ. ಅರಣ್ಯ ಪ್ರದೇಶದ ಸುತ್ತಮುತ್ತಲ ಜನತೆ ಕಾಡನ್ನು ರಕ್ಷಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅರಣ್ಯ ಪ್ರವೇಶಿಸಬಾರದು. ಕಾಡು ಪ್ರಾಣಿಗಳನ್ನು ಬೇಟೆಯಾಡಬಾರದು. ಇವೆಲ್ಲವೂ ಶಿಕ್ಷಾರ್ಹ ಅಪರಾಧ. ಇದಕ್ಕೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಎಚ್ಚರಿಸಿದರು.

ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೈತ್ರ, ಚನ್ನಪಟ್ಟಣ ಆರ್ಯಪ್ಪ ಮಲ್ಲೇಶ್, ಉಪಾ ವಲಯ ಅರಣ್ಯ ಅಧಿಕಾರಿ ಶಿವಕುಮಾರ್, ಮುತ್ತು ನಾಯಕ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.