ADVERTISEMENT

ಕನಕಪುರ: ಕುರಿ ಮೈ ತೊಳೆಯಲು ಹೋಗಿ ನೀರು ಪಾಲಾದ ತಂದೆ, ಮಗ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:22 IST
Last Updated 6 ಜನವರಿ 2024, 15:22 IST
ಕನಕಪುರ ಕುರುಬಳ್ಳಿ ಗ್ರಾಮದಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಮೃತಪಟ್ಟಿದ್ದ ರಾಜು ಮತ್ತು ಪ್ರಸನ್ನ ಅವರ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದರು
ಕನಕಪುರ ಕುರುಬಳ್ಳಿ ಗ್ರಾಮದಲ್ಲಿ ಕುರಿಗಳ ಮೈ ತೊಳೆಯಲು ಹೋಗಿ ಮೃತಪಟ್ಟಿದ್ದ ರಾಜು ಮತ್ತು ಪ್ರಸನ್ನ ಅವರ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದರು    

ಕನಕಪುರ: ಕುರಿಗಳ ಮೈ ಕೊಳೆಯಾಗಿದೆ ಎಂದು ಕೆರೆಯಲ್ಲಿ ತೊಳೆಯಲು ಹೋದ ತಂದೆ ಮತ್ತು ಮಗ ನೀರು ಪಾಲಾದ ಘಟನೆ ಕುರುಬಳ್ಳಿ ಗ್ರಾಮದಲ್ಲಿ ಶುಕ್ರವಾರ ನಡಿದಿದೆ.

ಮೃತರನ್ನು ತಾಲ್ಲೂಕಿನ ಸಾತನೂರು ಹೋಬಳಿ ಕುರುಬಳ್ಳಿ ಗ್ರಾಮದ ರಾಜು (50) ಮತ್ತು ಅವರ ಮಗ ಪ್ರಸನ್ನ (23) ಎಂದು ಗುರುತಿಸಲಾಗಿದೆ.

ಇವರು ಮೂಲತಃ ಕುರಿ ಸಾಕಾಣಿಕೆಯನ್ನೇ ಕಸುಬಾಗಿಸಿಕೊಂಡು ಬಂದಿದ್ದವರು. ತಂದೆ ಮತ್ತು ಮಗ ಇಬ್ಬರು ಸೇರಿ ಕುರುಬಳ್ಳಿ ಗೇಟ್‌ ಬಳಿಯ ಕುರುಬಳ್ಳಿ ಹಳೆ ಕೆರೆಯಲ್ಲಿ ಶುಕ್ರವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕುರಿಗಳ ಮೈ ತೊಳೆಯಲು ಹೋಗಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಒಬ್ಬರು ಕಾಲುಜಾರಿ ನೀರಿನಲ್ಲಿ ಮುಳುಗಿದ್ದಾರೆ. ಅವರನ್ನು ಕಾಪಾಡಲು ಮತ್ತೊಬ್ಬರು ಹೋಗಿ ಅವರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಘಟನೆ ಆದ ಸ್ವಲ್ಪ ಸಮಯದ ನಂತರ ಅಕ್ಕಪಕ್ಕದಲ್ಲಿ ಕುರಿ ಮೇಯಿಸುತ್ತಿದ್ದವರು ಅನುಮಾನಗೊಂಡು ನೋಡಿದಾಗ ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ. ತಕ್ಷಣವೇ ಗ್ರಾಮದ ಜನತೆಗೆ ಮತ್ತು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ತೆಪ್ಪ ಮತ್ತು ಬಲೆಯನ್ನು ಬಳಸಿ ಕೆರೆಯಲ್ಲಿ ಶೋಧ ನಡೆಸಿ ಮುಳುಗಿದ್ದ ತಂದೆ ಮತ್ತು ಮಗನ ಶವವನ್ನು ಹೊರತೆಗೆದಿದ್ದಾರೆ. ಎರಡು ಮೃತದೇಹವನ್ನು ಹೊರ ತೆಗೆಯುತ್ತಿದ್ದಂತೆ ಮೃತರ ಪತ್ನಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತರ ಅಂತ್ಯಸಂಸ್ಕಾರವನ್ನು ಕುರುಬಳ್ಳಿ ಗ್ರಾಮದಲ್ಲಿ ಶನಿವಾರ ನೆರವೇರಿಸುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.