ಮಾಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಶಾಸಕ ಎಚ್.ಸಿ. ಬಾಲಕೃಷ್ಣ ಹೇಮಾವತಿ ನೀರಿಗಾಗಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾ ಧರಣಿ ನಡೆಸಿದ್ದು ಹಾಸ್ಯಸ್ಪಾದ ಎಂದು ಮಾಜಿ ಶಾಸಕ ಎ.ಮಂಜುನಾಥ್ ಲೇವಡಿ ಮಾಡಿದರು.
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಗಡಿ ತಾಲ್ಲೂಕಿನ ರೈತರನ್ನು ಮೆಚ್ಚಿಸಲು ಬಾಲಕೃಷ್ಣ ರಸ್ತೆ ತಡೆ, ಪಾದಯಾತ್ರೆ ಮಾಡುತ್ತಿದ್ದಾರೆ.ಬಂಧನ, ಬಿಡುಗಡೆ ಇವೆಲ್ಲವೂ ಏಕಪಾತ್ರ ಅಭಿನಯವಿದ್ದಂತೆ ಕಾಣುತ್ತಿದೆ ಎಂದರು.
ಬಾಲಕೃಷ್ಣ ಪ್ರತಿನಿಧಿಸುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಈ ಹೋರಾಟ ಏಕೆ? ಎಲ್ಲವೂ ಜನರಿಗೆ ಅರ್ಥವಾಗುತ್ತಿದೆ. ಪಕ್ಷಾತೀತ ಹೋರಾಟ ಮಾಡುವುದಾಗಿ ಹೇಳಿದವರು ಪೂರ್ವಸಿದ್ದತಾ ಸಭೆಗೆ ಯಾವ ಪಕ್ಷದವರನ್ನೂ ಆಹ್ವಾನಿಸಲಿಲ್ಲ. ಗಂಭಿರ ಚಿಂತನೆಯಿಲ್ಲ, ಚರ್ಚೆ ನಡೆಯಲಿಲ್ಲ. ಪ್ರಚಾರಕ್ಕಾಗಿ ಮಾತ್ರ ಹೋರಾಟ ಮಾಡಿದರು ಎಂದರು.
‘ಶಾಸಕರಿಗೆ ಹೇಮಾವತಿ ನೀರಾವರಿ ಯೋಜನೆ ಮಾಹಿತಿ ಕೊರತೆಯಿದೆ. ದ್ವಂದ್ವ ಹೇಳಿಕೆ ನೀಡುತ್ತಾ ನೀರಿನ ರಾಜಕೀಯ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಬಾಲಕೃಷ್ಣ ಅವರಿಗೆ ಬದ್ಧತೆ ಇದ್ದರೆ ವಿಧಾನಸೌಧ ಮುಂದಿನ ಗಾಂಧಿ ಪ್ರತಿಮೆ ಬಳಿ ಸತ್ಯಾಗ್ರಹ ಮಾಡಲಿ. ಸತ್ಯಾಗ್ರಹದಲ್ಲಿ ನಾನೂ ಭಾಗವಹಿಸುತ್ತೇನೆ. ಅದನ್ನು ಬಿಟ್ಟು ಹೋರಾಟದ ದೊಂಬರಾಟ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ.ಬಾಲರಘು, ಲೋಕೇಶ್, ಜೆಡಿಎಸ್‌ನ ಗಂಗರಾಜು, ಕೆಂಪೇಗೌಡ, ಬಿ.ಎಸ್.ಸುಹೇಲ್, ವಿಜಯಕುಮಾರ್, ಜಯಕುಮಾರ್, ಶಿವರಾಮಯ್ಯ, ಮೂರ್ತಿ,ವೆಂಕಟೇಶ್, ಶಿವಕುಮಾರ್, ಎಂ.ಬಿ.ಮಹೇಶ್, ಉಮೇಶ್, ಶಿವಣ್ಣ ಇದ್ದರು.
ಮಾಗಡಿ ಪಾಲಿನ ಹೇಮಾವತಿ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿಲ್ಲ. ಕಾನೂನು ಹೋರಾಟದಿಂದ ಮಾಗಡಿಗೆ ಹೇಮಾವತಿ ನೀರು ಪಡೆಯಬಹುದುಎ.ಮಂಜುನಾಥ್ ಮಾಜಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.