ADVERTISEMENT

ರಾಮನಗರ: ಜ. 15ರಿಂದ 4 ದಿನ ರಾಮೋತ್ಸವ

ಶ್ರೀನಿವಾಸ ಕಲ್ಯಾಣ, ಸಂಗೀತ ಸಂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ–ಧಾರ್ಮಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 5:12 IST
Last Updated 2 ಜನವರಿ 2026, 5:12 IST
   

ರಾಮನಗರ: ‘‌ನಗರದಲ್ಲಿ ಜ. 15ರಿಂದ 18ರವರೆಗೆ ನಾಲ್ಕು ದಿನ ರಾಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಉತ್ಸವದ ನಿಮಿತ್ತ ಶ್ರೀನಿವಾಸ ಕಲ್ಯಾಣ, ಸಂಗೀತ ಸಂಜೆ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ರಾಮೋತ್ಸವ ಪ್ರಯುಕ್ತ ನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದಲ್ಲಿ ನಗರದ ದೇವಸ್ಥಾನಗಳ ಅರ್ಚಕರು ಹಾಗೂ ಆಡಳಿತ ಮಂಡಳಿ ಪದಾಕಾರಿಗಳ ಜೊತೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಜ. 15ರಂದು ರಾಮ ತಾರಕ ಯಜ್ಞ ನಡೆಯಲಿದೆ. ಅಭಯ ಆಂಜನೇಯ ಸ್ವಾಮಿ ಗೋಪುರದ ಬಳಿ ಇರುವ ಮೈದಾನದಲ್ಲಿ ಬೆಳಿಗ್ಗೆ 5ರಿಂದ ನಡೆಯುವ ಯಜ್ಞದಲ್ಲಿ 200 ಪುರೋಹಿತರು ಭಾಗವಹಿಸಲಿದ್ದಾರೆ’ ಎಂದರು.

‘ಜ. 16ರಂದು ಬೆಳಿಗ್ಗೆ 5.30ರಿಂದ 7.30ರವರೆಗೆ ಪಂಡಿತ ವಚನಾಂದ ಸ್ವಾಮೀಜಿ ಅವರು ಯೋಗಾಸನ ಹೇಳಿ ಕೊಡಲಿದ್ದಾರೆ. 11 ಗಂಟೆಗೆ ವಿಶಾಲವಾದ ವೇದಿಕೆಯಲ್ಲಿ ಆಯೋಜಿಸಿರುವ ‘ವಾಯ್ಸ್ ಆಫ್ ರಾಮನಗರ’ ಕಾರ್ಯಕ್ರಮದಲ್ಲಿ ಮಕ್ಕಳಿಂದ ಚಲನಚಿತ್ರ ಗೀತೆ, ಭಾವಗೀತೆ, ಜನಪದ ಗೀತೆ ಹಾಗೂ ಮಧ್ಯಾಹ್ನ 2 ಗಂಟೆಗೆ ರಂಗಗೀತೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅಂದು ಸಂಜೆ 6 ಗಂಟೆಗೆ ಕ್ಷೇತ್ರದ 950ಕ್ಕೂ ಹೆಚ್ಚು ದೇವರುಗಳು ಮತ್ತು ಉತ್ಸವ ಮೂರ್ತಿಗಳಿಗೆ ಸಕಲ ಪೂಜೆ ಜರುಗಲಿದೆ. ಅಲಂಕೃತ ಪಲ್ಲಕ್ಕಿಯಲ್ಲಿ ಆಯಾ ಗ್ರಾಮದ ಮುಖ್ಯಸ್ಥರು, ಅರ್ಚಕರ ನೇತೃತ್ವದಲ್ಲಿ ನಗರಕ್ಕೆ ಕರೆತಂದು ವಿಜಯನಗರದ ಅಭಯ ಆಂಜನೇಯ ಸ್ವಾಮಿ ದೇವಾಲಯದ ಸನ್ನಿಧಾನದಿಂದ ದೇವರುಗಳ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ 5 ಸಾವಿರ ತಮಟೆ ವಾದಕರು, ರಾಜ್ಯದ ವಿವಿಧ ಭಾಗಗಳ ಹೆಸರಾಂತ 200 ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಮಂಗಳೂರಿನ 100 ಜನರ ತಂಡವು ಶ್ರೀರಾಮನ ಭಜನೆ ನಡೆಸಿ ಕೊಡಲಿದೆ’ ಎಂದು ಹೇಳಿದರು.

‘ಜನಪ್ರಿಯ ಮಡಿಕೇರಿ ದಸರಾದಲ್ಲಿ ಬಳಸುವ ಗಣೇಶನ ಅವತಾರ, ರಾಮದೇವರ ಬೆಟ್ಟದಲ್ಲಿ ಪುರಾಣ ಪ್ರಸಿದ್ಧ ಕಾಕಾಸುರನ ಸಂಹಾರ ಮಾಡುತ್ತಿರುವ ಕಥೆಯನ್ನು ಆಧರಿಸಿದ ರಾಮ, ಸೀತಾ, ಲಕ್ಷ್ಮಣ ಹಾಗೂ ಆಂಜನೇಯ ದೇವರು, ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ಮಹಿಮೆ ತೋರುವ ಮೂರು ವರ್ಣರಂಜಿತ ಸ್ತಬ್ಧಚಿತ್ರಗಳ ಪ್ರದರ್ಶನವನ್ನು ನಗರದ ವಾಟರ್ ಟ್ಯಾಂಕ್, ಗಾಂಧಿನಗರ, ಹಳೆ ಬಸ್ ನಿಲ್ದಾಣ, ಐಜೂರು ವೃತ್ತ ಹಾಗೂ ಕೆಂಪೇಗೌಡ ವೃತ್ತದ ಏರ್ಪಡಿಸಲಾಗಿದೆ’ ಎಂದರು.

‘ಸ0ಜೆ 5ರಿಂದ 7ರರೆಗೆ ಶ್ರೀನಿವಾಸ ಕಲ್ಯಾಣೋತ್ಸವ ಏರ್ಪಡಿಸಲಾಗಿದೆ. ಅಂದು ಭಕ್ತರಿಗೆ ತಿರುಪತಿ ಲಾಡು ವಿತರಿಸಲಾಗುವುದು. ಪಕ್ಕದಲ್ಲೇ ತಾತ್ಕಾಲಿಕ ದೇವಸ್ಥಾನ ನಿರ್ಮಿಸಲಾಗುವುದು. ಜ. 18ರಂದು ಸಂಜೆ 7ಕ್ಕೆ ನಡೆಯಲಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿನಿಮಾ ನಟರಾದ ಸುದೀಪ್, ಯಶ್ ಹಾಗೂ ನಟಿ ರಚಿತಾ ರಾಮ್ ಭಾಗವಹಿಸಲಿದ್ದಾರೆ. ಜನಪ್ರಿಯ ಗಾಯಕರು ಹಾಡುಗಳ ರಸದೌತಣ ಬಡಿಸಲಿದ್ದಾರೆ’ ಎಂದು ತಿಳಿಸಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಸಮಿತಿ ಕೆ. ರಾಜು, ತಾಲೂಕು ಅಧ್ಯಕ್ಷ ವಿ.ಎಚ್. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿ.ಎನ್.ಆರ್. ವೆಂಕಟೇಶ್, ನರಸಿಂಹಯ್ಯ, ನಗರದ ವಿವಿಧ ದೇವಸ್ಥಾನಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಅರ್ಚಕರು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.