ADVERTISEMENT

ಜಾನುವಾರುಗಳಿಗೆ ಸರ್ಕಾರದಿಂದಲೇ ಉಚಿತ ವಿಮೆ

ಪರಿಶಿಷ್ಟ ಜಾತಿ, ಪಂಗಡದ ಜನರಿಗಾಗಿ ಹೊಸ ಯೋಜನೆ ಜಾರಿ; ಅರ್ಜಿ ಸಲ್ಲಿಕೆ ಆರಂಭ

ಆರ್.ಜಿತೇಂದ್ರ
Published 22 ಡಿಸೆಂಬರ್ 2018, 19:30 IST
Last Updated 22 ಡಿಸೆಂಬರ್ 2018, 19:30 IST

ರಾಮನಗರ: ಹೈನುಗಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಕನಸಿಗೆ ಸರ್ಕಾರ ನೀರೆರೆದಿದ್ದು, ಜಾನುವಾರುಗಳಿಗೆ ತಗುಲುವ ಸಂಪೂರ್ಣ ವಿಮೆ ವೆಚ್ಚವನ್ನು ತಾನೇ ಭರಿಸಲಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಮೂಲಕ ಪ್ರಸಕ್ತ ಹಣಕಾಸು ವರ್ಷದಿಂದಲೇ ಈ ಯೋಜನೆಯು ಜಾರಿಗೆ ಬಂದಿದೆ. ಇದರ ಅಡಿ ಈ ಸಮುದಾಯಗಳ ಅರ್ಹ ಫಲಾನುಭವಿಗಳು ತಾವು ಹೊಂದಿರುವ ಜಾನುವಾರುಗಳಿಗೆ ಸರ್ಕಾರದಿಂದಲೇ ಉಚಿತವಾಗಿ ವಿಮೆಯನ್ನು ಪಡೆಯಬಹುದಾಗಿದೆ.

ಹಾಲು ಉತ್ಪಾದಕರ ಉತ್ತೇಜನದ ವಿಶೇಷ ಘಟಕ, ಗಿರಿಜನ ಉಪ ಯೋಜನೆ ಹಾಗೂ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಈ ನೆರವು ಸಿಗಲಿದೆ. ಒಂದರಿಂದ ಎಂಟು ವರ್ಷ ವಯಸ್ಸಿನ ಆಕಳು, ಎಮ್ಮೆ, ಹೋರಿ. ಎತ್ತು, ಕೋಣಗಳಿಗೆ ಈ ವಿಮೆ ಮಾಡಿಸಬಹುದಾಗಿದೆ. ಮೂರು ವರ್ಷ ಅವಧಿಯ ವಿಮೆ ಇದಾಗಿದ್ದು, ಗರಿಷ್ಠ ₨50 ಸಾವಿರ ಪರಿಹಾರ ಸಿಗಲಿದೆ. ವಿಮೆ ಮೊತ್ತದ ಶೇ 5.7 ಕಂತಿನ ಹಣವನ್ನು ಸರ್ಕಾರವೇ ಭರಿಸಲಿದೆ.

ADVERTISEMENT

ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಗೆ ಸರ್ಕಾರವು ಮೊದಲ ಹಂತದಲ್ಲಿ ₨19 ಲಕ್ಷ ಅನುದಾನ ನೀಡಿದ್ದು, ಪರಿಶಿಷ್ಟ ಜಾತಿಯ 600 ಹಾಗೂ ಪರಿಶಿಷ್ಟ ವರ್ಗದ 100 ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ.

ರಾಜ್ಯದಲ್ಲಿ ಯುನೈಟೆಡ್ ಇಂಡಿಯಾ, ನ್ಯೂ ಇಂಡಿಯಾ ಇನ್ಶೂರೆನ್ಸ್, ಓರಿಯಂಟಲ್‌ ಇಂಡಿಯಾ ಇನ್ಶೂರೆನ್ಸ್ ಕಂಪನಿಗಳನ್ನು ಈ ವಿಮೆ ಯೋಜನೆಯ ಅನುಷ್ಠಾನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?: ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, ಶಾಸಕರ ನೇತೃತ್ವದ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡಲಿದೆ. ಜಿಲ್ಲೆಯಲ್ಲಿ ಇರುವ ಈ ಸಮುದಾಯಗಳ ಜನರ ಸಂಖ್ಯೆಗೆ ಅನುಗುಣವಾಗಿ ಫಲಾನುಭವಿಗಳ ಸಂಖ್ಯೆಯೂ ನಿಗದಿ ಆಗಲಿದೆ. ಮೌಲ್ಯ ನಿರ್ಧರಿಸುವ ಅವಕಾಶ: ಜನರು ತಮ್ಮಲ್ಲಿನ ಜಾನುವಾರುಗಳ ಮಾರುಕಟ್ಟೆ ಮೌಲ್ಯ ಎಷ್ಟೆಂಬುದನ್ನು ಪಶು ವೈದ್ಯಾಧಿಕಾರಿಗಳು ಹಾಗೂ ವಿಮೆ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧರಿಸಬಹುದಾಗಿದೆ.

‘ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ. ಆಸಕ್ತ ರೈತರು ತಮ್ಮ ತಾಲ್ಲೂಕಿನ ಪಶು ವೈದ್ಯಕೀಯ ಇಲಾಖೆ ಕಚೇರಿ ಇಲ್ಲವೇ ಸಮೀಪದ ಪಶುವೈದ್ಯರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಇಲಾಖೆಯ ಪ್ರಭಾರ ಉಪ ನಿರ್ದೇಶಕ ವರದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ನಿಬಂಧನೆಗಳು
ಸದ್ಯಕ್ಕೆ ಒಂದು ಕುಟುಂಬಕ್ಕೆ ಒಂದೇ ಜಾನುವಾರಿಗೆ ವಿಮೆ ಸೌಲಭ್ಯ ಸಿಗಲಿದೆ. ಹಂತಹಂತವಾಗಿ ಎಲ್ಲ ಜಾನುವಾರುಗಳನ್ನೂ ಈ ಯೋಜನೆಗೆ ಒಳಪಡಿಸುವ ಗುರಿ ಹೊಂದಲಾಗಿದೆ. ಈ ಹಿಂದೆ ಯಾವುದೇ ವಿಮೆಗೆ ಒಳಪಡದ ಜಾನುವಾರುವನ್ನು ಮಾತ್ರ ಈ ಯೋಜನೆಗೆ ಪರಿಗಣಿಸಲಾಗುವುದು.

*ಹೊಸ ವಿಮೆ ಯೋಜನೆಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ತಮ್ಮ ಸಮೀಪದ ಪಶು ವೈದ್ಯರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
–ವರದರಾಜು,ಪ್ರಭಾರ ಉಪನಿರ್ದೇಶಕ, ಪಶುಪಾಲನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.