ADVERTISEMENT

ಗಾಂಧಿ ಜಯಂತಿ ಆಚರಣೆ: ಮಹಾತ್ಮನ ಸ್ಮರಣೆ

ಜಿಲ್ಲೆಯ ವಿವಿಧ ಶಾಲೆ–ಕಾಲೇಜು, ಸಂಘ–ಸಂಸ್ಥೆಗಳಿಂದ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 13:17 IST
Last Updated 2 ಅಕ್ಟೋಬರ್ 2019, 13:17 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ‘ಪಾಪು ಬಾಪು’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ ‘ಪಾಪು ಬಾಪು’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು   

ರಾಮನಗರ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮದಿನವನ್ನು ಬುಧವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು ‘ಗಾಂಧಿಯವರು ಅಹಿಂಸೆಯ ಮೂಲಕವೇ ಹೋರಾಟದ ನೇತೃತ್ವ ವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಅವರ ಬದುಕು ಮತ್ತು ಹೋರಾಟ ನಮ್ಮೆಲ್ಲರಿಗೂ ಮಾದರಿ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಹೊರತಂದಿರುವ ‘ಪಾಪು ಬಾಪು’ ಎಂಬ ಕಿರುಪುಸ್ತಕವನ್ನು ಅವರು ಬಿಡುಗಡೆ ಮಾಡಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಸ್ವಾಗತಿಸಿ, ವಂದಿಸಿದರು. ರಮಣೀ ಮತ್ತು ತಂಡದವರು ಗಾಂಧೀಜಿ ಅವರ ಕುರಿತು ಗೀತಗಾಯನ ಕಾರ್ಯಕ್ರಮವನ್ನು ನಡೆಸಿದರು.

ADVERTISEMENT

ಐಜೂರು ಅಂಗನವಾಡಿ: ಕುಮಾರಣ್ಣ ಅಭಿಮಾನಿ ಬಳಗದವರು ಇಲ್ಲಿನ ಅಂಗನವಾಡಿಯಲ್ಲಿ ಸಸಿ ನೆಡುವ ಮೂಲಕ ಗಾಂಧಿ ಜಯಂತಿ ಆಚರಿಸಿದರು.

ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿದ ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ‘ಗಾಂಧೀಜಿ ಯವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದರು. ಅಹಿಂಸೆಯ ಅಸ್ತ್ರ ಹಿಡಿದು ರಾಷ್ಟ್ರವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ತಮ್ಮ ಸರಳ ಬದುಕನ್ನು ಮುಂದುವರೆಸಿದ ಮಹಾನ್ ಚೇತನ ಇಂದಿಗೂ ಮಾದರಿ ನಾಯಕರಾಗಿದ್ದಾರೆ. ಗಾಂಧೀಜಿ ಯವರ ಕನಸು ದೇಶ ಸ್ವಚ್ಛ ವಾಗಿರಬೇಕು, ರಾಮರಾಜ್ಯವಾಗಿರಬೇಕು, ನಾಡು ಹಸಿರು ಮಯವಾಗಿರಬೇಕು ಎನ್ನುವುದು. ಮಕ್ಕಳು, ಪೋಷಕರು ತಮ್ಮ ಮನೆಯ ಮುಂದೆ ಸಸಿಗಳನ್ನು ಬೆಳೆಸುವ ಪಣತೊಡೋಣ ’ ಎಂದರು.

ಮುಖಂಡರಾದ ಸಿ.ಎಸ್. ಜಯಕುಮಾರ್, ತುಂಬೇನಹಳ್ಳಿ ಶಿವಕುಮಾರ್, ಜಕಿ಼ಉಲ್ಲಾಖಾನ್, ಪಿ. ರಘು, ಅಸ್ಲಂ ಪಾಷಾ, ಶಿವಾಜಿ ರಾವ್, ಸಿ.ಎಸ್.ರಾಜು, ಜೆ.ಸಿ.ಗೌಡ, ಅಂಗನವಾಡಿ ಶಿಕ್ಷಕಿ ಶಿವರತ್ನಮ್ಮ, ಸಹಾಯಕಿ ಲಕ್ಷ್ಮೀ ಇದ್ದರು.

ನೇತಾಜಿ ಪಾಪ್ಯುಲರ್ ಇಂಗ್ಲಿಷ್‌ ಮಾಧ್ಯಮ ಶಾಲೆ: ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಪರಶುರಾಮ್ ಮಾತನಾಡಿ, ಈ ಇಬ್ಬರು ನಾಯಕರ ಆದರ್ಶಗಳನ್ನು ನಾವೆಲ್ಲ ಅನುಸರಿಸಬೇಕು. ಗ್ರಾಮ ಭಾರತ ಸ್ವಚ್ಛ ಭಾರತ, ಮದ್ಯಪಾನ ನಿಷೇಧಕ್ಕೆ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಶಾಲೆಯ ಅಧ್ಯಕ್ಷ ಕೆ. ಗುರುವೇಗೌಡ, ಉಪಾಧ್ಯಕ್ಷ ಪರಮಶಿವಯ್ಯ ಗಾಂಧಿ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಾದ ಯಶವಂತ್‌, ಶಶಾಂಕ್‌, ಜಯಂತ್‌ ಹಾಗೂ ಅನುಷಾ ಅವರು ಮಹಾತ್ಮ ಗಾಂಧಿ ಕುರಿತು ಭಾಷಣ ಮಾಡಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಸಿ. ಚಿನ್ಮಯ್‌ ಭರತನಾಟ್ಯ ಪ್ರದರ್ಶನ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ವಸಂತಾ ವೀರೇಗೌಡ, ಮಾರ್ಗದರ್ಶಕ ರಾಜಶೇಖರಯ್ಯ, ಮುಖ್ಯ ಶಿಕ್ಷಕಿ ಆಶಾ, ಶೀಲಾ, ಆಡಳಿತ ಮಂಡಳಿಯ ನವೀನ್‌, ಪ್ರವೀಣ್‌ ಇದ್ದರು. ಭಂಡಾರಿ ಪ್ರಾರ್ಥಿಸಿದರು. ಆಶಾ ಸ್ವಾಗತಿಸಿದರು, ಗಂಗರತ್ನಾ ನಿರೂಪಿಸಿದರು. ಮಾಲತಿ ವಂದಿಸಿದರು.

ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆ: ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಚೇತನ್‌ಕುಮಾರ್ ಮಾತನಾಡಿ, ಗಾಂಧಿ ತಮ್ಮ ಜೀವನದಲ್ಲಿ ಹಲವಾರು ವಿಷಯ ಮತ್ತು ವ್ಯಕ್ತಿಗಳಿಂದ ಪ್ರಭಾವಿತರಾಗಿದ್ದರು. ಅವುಗಳಲ್ಲಿ ಶ್ರವಣನ ಪಿತೃಭಕ್ತಿ, ಮತ್ತು ಸತ್ಯಹರೀಶ್ಚಂದ್ರ ನಾಟಕಗಳು ಪ್ರಭಾವ ಬೀರಿದ್ದವು. ಇದರಿಂದಾಗಿ ಅವರು ಜೀವನದಲ್ಲಿ ಸತ್ಯ ಮತ್ತು ಅಹಿಂಸೆಗಳೆಂಬ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ಗಣಿತ ಉಪನ್ಯಾಸಕ ಶರತ್‌ ಮಾತನಾಡಿದರು.ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಲೂಕು ಆಡಳಿತ: ರಾಮನಗರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷ ಗಾಣಕಲ್‌ ನಟರಾಜು ಬಾಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದರು. ಈ ವೇಳೆ ತಾಪಂನ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ: ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭಾರ ಅಧಿಕಾರಿ ಮಂಜುಳಾ ದೇವಿ ಮಾತನಾಡಿ, ರಾಷ್ಟಪಿತ ಮಹಾತ್ಮ ಗಾಂಧಿ ದೇಶ ವಾಸಿಗಳ ಆಸ್ತಿ. ಅವರ ಆದರ್ಶ ಬದುಕು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು. ಆಮೂಲಕ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು. ಕೆಪಿಸಿಸಿ ಸದಸ್ಯ ಶಿವಲಿಂಗಯ್ಯ, ಮುಖಂಡರಾದ ವೆಂಕಟೇಶ್, ಮುಖಂಡ ಹರೀಶ್ ಬಾಲು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.