ADVERTISEMENT

ಹಾರೋಹಳ್ಳಿ | ಬನ್ನಿಕುಪ್ಪೆಯ ರಸ್ತೆ, ಕಸದ್ದೇ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 4:36 IST
Last Updated 20 ಫೆಬ್ರುವರಿ 2024, 4:36 IST
<div class="paragraphs"><p>ಹಾರೋಹಳ್ಳಿ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲೇ ಕಸ ವಿಲೇವಾರಿ ಮಾಡಲಾಗಿದೆ</p></div>

ಹಾರೋಹಳ್ಳಿ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲೇ ಕಸ ವಿಲೇವಾರಿ ಮಾಡಲಾಗಿದೆ

   

ಹಾರೋಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿನ ರಸ್ತೆಗಳ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ದುರ್ನಾತ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ. 

ಗ್ರಾಮದ ರಸ್ತೆಯಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ತಂದು ಸುರಿಯಲಾಗಿದೆ. ಪರಿಣಾಮ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಕಸ ಬಿಸಾಡಬೇಡಿ, ಬಿಸಾಡಿದರೆ ದಂಡ ಹಾಕಲಾಗುವುದು ಎಂಬ ಎಚ್ಚರಿಕೆಯ ಫಲಕದ ಬುಡದಲ್ಲಿಯೇ ರಾಶಿಯಾಗಿ ಕಸ ಬಿದ್ದಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.

ADVERTISEMENT

ಮದ್ಯದ ಬಾಟಲಿ, ತ್ಯಾಜ್ಯವನ್ನು ಎಸೆದಿದ್ದಾರೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ದಾರಿಹೋಕರು, ವಾಹನ ಸವಾರರು, ಸ್ಥಳೀಯರು ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಕೆಲವರು ರಾತ್ರಿಯ ಹೊತ್ತು ಕಸ ತಂದು ಸುರಿಯುತ್ತಾರೆ. ರಸ್ತೆ ಬದಿ ತ್ಯಾಜ್ಯ ಹಾಕದಂತೆ, ಕಸ ಸಂಗ್ರಹ ಮಾಡುವವರಿಗೇ ಕಸ ಕೊಡುವಂತೆ ಪಂಚಾಯಿತಿಯಿಂದ ನಿರಂತರ ಅರಿವು ಮೂಡಿಸುತ್ತಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ನಾಗರಿಕರು. 

ಕೈಗಾರಿಕ ತ್ಯಾಜ್ಯ:

ಬನ್ನಿಕುಪ್ಪೆ ಗ್ರಾಮಕ್ಕೆ ಹೊಂದಿಕೊಂಡಂತೆ ಹಲವು ಕಾರ್ಖಾನೆಗಳಿದ್ದು, ಅದರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆಯಲಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ಕೆಲಸಕ್ಕೆ ಹೋಗುವವರು ಬೆಳಗಿನ ಹೊತ್ತು ಪ್ಲಾಸ್ಟಿಕ್‌ ಕವರ್‌ನಲ್ಲಿ ಇಲ್ಲಿಯೇ ಕಸವನ್ನು ಬಿಸಾಡಿ ಹೋಗುತ್ತಾರೆ. ಕೆಲವರು ಯಾರಿಗೂ ಕಾಣದಂತೆ ರಾತ್ರಿ ತಂದು ಸುರಿಯುತ್ತಾರೆ. ಕಸ ಹಾಕದಂತೆ ಜಾಗೃತಿ ಫಲಕಗಳನ್ನು ಹಾಕಿದ್ದರೂ ಅಲ್ಲಿಯೇ ಬಿಸಾಡಿ ಹೋಗುತ್ತಾರೆ.  ಹಾಗಾಗಿ, ಇಲ್ಲಿ ಕಸ ಕೊಳೆತು ದುರ್ನಾತ ಬೀರುತ್ತಿದೆ.

ಬನ್ನಿಕುಪ್ಪೆ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಕಸದ ರಾಶಿ ಬೆಂಕಿ ಹಾಕಿರುವುದು

ತುಂಬಿದ ಚರಂಡಿಗಳು:

ಗ್ರಾಮದ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿರುವ ಚರಂಡಿಗಳಿಗೆ ಕಾರ್ಖಾನೆಗಳು ತ್ಯಾಜ್ಯನೀರನ್ನು ಬಿಡುತ್ತದೆ. ಈ ಚರಂಡಿಗಳು ಹರಿಯದೇ ಎಲ್ಲೆಂದರಲ್ಲಿ ಕಟ್ಟಿಕೊಂಡು ನೀರು ನಿಂತು ಗಬ್ಬು ವಾಸನೆ ಬೀರುತ್ತಿದೆ. ಕೆಲವೆಡೆ ಮಣ್ಣಿಂದ ಹೂಳು ತುಂಬಿದರೆ, ಇನ್ನೊಂದೆಡೆ ಗಿಡಗಳು ಮತ್ತು ಕಳೆಗಿಡಗಳು ಬೆಳೆದು ಚರಂಡಿಯೇ ಕಾಣದಂತಾಗಿದೆ.

ಬನ್ನಿಕುಪ್ಪೆ ಗ್ರಾಮದ ಬಳಿ ಕಾರ್ಖಾನೆಯೊಂದರ ತ್ಯಾಜ್ಯದ ನೀರನ್ನು ಚರಂಡಿಗೆ ಬಿಟ್ಟಿರುವುದು

ಕೆರೆಗೆ ತ್ಯಾಜ್ಯದ ನೀರು:

ಬನ್ನಿಕುಪ್ಪೆ ಗ್ರಾಮದ ಕೆರೆಗೆ ಸ್ಥಳೀಯ ಕಾರ್ಖಾನೆಗಳು ಬೀಡುವ ತ್ಯಾಜ್ಯದ ನೀರು ಚರಂಡಿ ಮೂಲಕ ಹರಿದು ಬನ್ನಿಕುಪ್ಪೆಯ ಕೆರೆ ಸೇರುತ್ತಿದೆ. ಇದರಿಂದ ಕೆರೆಯಲ್ಲಿನ ನೀರಿನ ಬಣ್ಣ ಬದಲಾಗಿದ್ದು, ಮೀನು ಸೇರಿದಂತೆ ಇತರ ಜಲಚರಗಳಿಗೆ ತೊಂದರೆಯಾಗಿದೆ.

ಹೆಸರಿಗಷ್ಟೇ ಪ್ಲಾಸ್ಟಿಕ್‌ ನಿಷೇಧ:

ಪ್ಲಾಸ್ಟಿಕ್‌ ಕವರಗಳ ಮಾರಾಟ, ಬಳಕೆ ನಿಷೇಧವಿದ್ದರೂ ಇಲ್ಲಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಗ್ರಾಮ ವ್ಯಾಪ್ತಿಯ ಹೊಟೇಲ್‌, ಅಂಗಡಿ, ಚಿಲ್ಲರೆ ಅಂಗಡಿ, ಬೇಕರಿ, ಹಣ್ಣಿನ ಅಂಗಡಿ, ಟೀ ಅಂಗಡಿ ಸೇರಿದಂತೆ ಇತರೆಡೆ ಇದರ ಬಳಕೆ ಅವ್ಯಾಹತವಾಗಿದೆ. ಇದನ್ನು ತಡೆಯಬೇಕಿರುವ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಅಧಿಕಾರಿಗಳು  ನಿಷೇಧಿತ ಪ್ಲಾಸ್ಟಿಕ್‌ ಮಾರಾಟ, ಬಳಕೆಯ ಬಗ್ಗೆ ನಿಗಾ ವಹಿಸುತ್ತಿಲ್ಲ. ಇದರಿಂದ ರಾಜಾರೋಷವಾಗಿ ಪ್ಲಾಸ್ಟಿಕ್‌ ಮಾರಾಟ, ಬಳಕೆ ಹೆಚ್ಚಾಗಿದ್ದು, ವಿಲೇವಾರಿಯಾಗದೇ ಕೆರೆಯ ಒಡಲು ಸೇರುತ್ತಿದೆ.

ಸಾಂಕ್ರಾಮಿಕ ರೋಗದ ಭೀತಿ:

ಗ್ರಾಮದಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತಿದ್ದು ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ.  ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ.

ಕಾರ್ಖಾನೆಯೊಂದರ ತ್ಯಾಜ್ಯದ ನೀರನ್ನು ಕೆರೆ ಬಿಡಲಾಗಿದ್ದು ಕೆರೆ ಮಲಿನವಾಗಿದೆ

ದಂಡ ವಿಧಿಸಿ:

ಕಸವನ್ನು ರಸ್ತೆಯಲ್ಲಿ ಎಸೆದು ಹೋಗುವವರ ಗುರುತಿಸಿ ಮತ್ತೆ ಇದು ಮತ್ತೆ ಮರುಕಳಿಸದಂತೆ ಎಚ್ಚರಿಕೆ ನೀಡಿ ದಂಡ ವಿಧಿಸಬೇಕು ಎಂದು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಬನ್ನಿಕುಪ್ಪೆ ಸರ್ಕಲ್ ಬಳಿ ರಸ್ತೆ ಅಕ್ಕಪಕ್ಕದಲ್ಲಿರುವ ಕಸ ವಿಲೇವಾರಿಯನ್ನು ಆದಷ್ಟು ಬೇಗನೆ ಮಾಡಲಾಗುವುದು
ಮಹದೇವ್. ಪಿಡಿಒ ಚೀಲೂರು ಗ್ರಾಮ ಪಂಚಾಯಿತಿ
ಗ್ರಾಮಕ್ಕೆ ಹೊಂದಿಕೊಂಡಂತೆ ಕೆಲವು ಕಾರ್ಖಾನೆಗಳು ಇವೆ.  ಪ್ರತಿದಿನ ಇಲ್ಲಿನ ಅಂಗಡಿಗಳ ತ್ಯಾಜ್ಯ ಹಾಗೂ ಕಾರ್ಮಿಕರು ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುವುದರಿಂದ ಕಸ ಕೊಳೆತು ನಾರುತ್ತಿದೆ. ಸ್ಥಳೀಯ ಆಡಳಿತ ಆದಷ್ಟು ಬೇಗ ಕಸ ವಿಲೇವಾರಿ ಮಾಡುವ ಜತೆಗೆ ಕಸ ಹಾಕದಂತೆ ಎಚ್ಚರ ವಹಿಸಬೇಕು.
ದೇವರಾಜ್ ಬನ್ನಿಕಪ್ಪೆ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.