ADVERTISEMENT

ಎಫ್‌ಎಸ್ಎಲ್ ವರದಿಯತ್ತ ಎಲ್ಲರ ಚಿತ್ತ

ಅರೆ ನಗ್ನಾವಸ್ಥೆಯಲ್ಲಿ ಬಾಲಕಿ ಶವ ಪತ್ತೆ ಪ್ರಕರಣ; ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ಘಟನೆ

ಓದೇಶ ಸಕಲೇಶಪುರ
Published 16 ಮೇ 2025, 4:50 IST
Last Updated 16 ಮೇ 2025, 4:50 IST
ಬಾಲಕಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಿಡದಿಯ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಬಿಡದಿ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು
ಬಾಲಕಿ ಕೊಲೆ ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಿಡದಿಯ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಬಿಡದಿ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು   

ಬಿಡದಿ (ರಾಮನಗರ): ಹೋಬಳಿ ವ್ಯಾಪ್ತಿಯಲ್ಲಿ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿದ್ದ 15 ವರ್ಷದ ಬಾಲಕಿ ಶವದ ಪ್ರಕರಣದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರೈಲು ಹಳಿ ಪಕ್ಕ ಶವವಾಗಿ ಪತ್ತೆಯಾದ ಬಾಲಕಿಯದ್ದು ಕೊಲೆಯೊ ಅಥವಾ ಅತ್ಯಾಚಾರ ಎಸಗಿ ನಡೆಸಿರುವ ಹತ್ಯೆಯೊ ಎಂಬ ಜಟಿಲ ಪ್ರಶ್ನೆಗಳ ನಡುವೆಯೇ, ಪೊಲೀಸರು ಸೇರಿದಂತೆ ಎಲ್ಲರ ಚಿತ್ತ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯದ) ವರದಿಯತ್ತ ನೆಟ್ಟಿದೆ.

ಘಟನೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳನ್ನು ಬಂಧಿಸದ ಪೊಲೀಸರು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಕಿ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಯೂ ಟ್ಯೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಸಾಹಿತಿಗಳು, ಹೋರಾಟಗಾರರು, ವಿವಿಧ ಸಂಘಟನೆಗಳು ನಾಯಕರು ಸಹ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಹೆಚ್ಚಿದ ಒತ್ತಡ: ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿ, ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗ್ರಾಮಕ್ಕೆ ಭೇಟಿ ನೀಡಿ, ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರದ ಚೆಕ್ ವಿತರಿಸಿ ಹೋಗಿದ್ದಾರೆ. ಇದರ ಬೆನ್ನಲ್ಲೇ, ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದ್ದು ತನಿಖೆ ತೀವ್ರಗೊಳಿಸಿದ್ದಾರೆ. ಬಾಲಕಿ ತಾಯಿ ಸೇರಿದಂತೆ ಕುಟುಂಬದವರನ್ನು ಗುರುವಾರ ಮತ್ತೆ ಬಿಡದಿ ಠಾಣೆಗೆ ಕರೆಯಿಸಿ, ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ನೇತೃತ್ವದಲ್ಲಿ ವಿಚಾರಣೆ ನಡೆಸಿ ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ADVERTISEMENT

ಬಾಲಕಿ ತಾಯಿ ಸೇರಿದಂತೆ ಇಡೀ ಕುಟುಂಬ ಹಾಗೂ ಗ್ರಾಮಸ್ಥರು ಅತ್ಯಾಚಾರದ ಶಂಕೆ ವ್ಯಕ್ತಪಡಿಸಿರುವುದರಿಂದ, ಆರೋಪ ಅಲ್ಲಗಳೆಯಲಾದ ಸ್ಥಿತಿಯಲ್ಲಿ ಪೊಲೀಸರಿದ್ದಾರೆ. ಎಫ್‌ಎಸ್‌ಎಲ್ ವರದಿ ಬರುವುದಕ್ಕೆ ಮುಂಚೆ, ಏನಾದರೂ ಸುಳಿವು ಅಥವಾ ಸಾಕ್ಷ್ಯ ಸಿಗಬಹುದೇ ಎಂದು ಘಟನಾ ಸ್ಥಳ ಸೇರಿದಂತೆ ಇಡೀ ಗ್ರಾಮವನ್ನು ತಡಕಾಡುತ್ತಿದ್ದಾರೆ. ಈಗಾಗಲೇ ವಶಕ್ಕೆ ಪಡೆದಿದ್ದ 6 ಶಂಕಿತರನ್ನು ಮರು ವಿಚಾರಣೆಗೆ ಒಳಪಡಿಸಿದ್ದಾರೆ.

ಊರಿನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲನೆ, ಘಟನಾ ಕ್ಷಣದ ಆಸುಪಾಸಿನಲ್ಲಿ ಗಂಟೆಗಳಲ್ಲಿ ಸಂಚರಿಸಿರುವ ವಾಹನಗಳ ಮಾಹಿತಿ ಸಂಗ್ರಹ, ಶವ ಪತ್ತೆಯಾದ ಸ್ಥಳದ ಬಳಿ ಇರುವ ಮೊಬೈಲ್‌ ಟವರ್‌ನಿಂದ ಹೋಗಿರುವ ಮತ್ತು ಬಂದಿರುವ ಕರೆಗಳ ಮಾಹಿತಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳ ಹುಡುಕಾಟದಲ್ಲಿ ಹಗಲು–ರಾತ್ರಿ ತೊಡಸಿಕೊಂಡಿದ್ದಾರೆ.

ಸಂಸದ, ಜಡ್ಜ್, ಐಜಿಪಿ ಭೇಟಿ: ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸಂಸದ ಡಾ. ಸಿ.ಎನ್. ಮಂಜುನಾಥ್, ಕೇಂದ್ರ ವಲಯದ ಐಜಿಪಿ ಲಾಭೂ ರಾಮ್, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ ಪಿ.ಆರ್ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದರು. ಬಾಲಕಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಾಲಕಿ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದ ಇದುವರೆಗಿನ ಬೆಳವಣಿಗೆಗಳ ಕುರಿತು ಲಾಭೂ ರಾಮ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಡಿವೈಎಸ್ಪಿಗಳಾದ ಶ್ರೀನಿವಾಸ್, ಪ್ರವೀಣ್‌ ಕುಮಾರ್, ಗಿರಿ, ತನಿಖಾಧಿಕಾರಿ ಬಿಡದಿ ಇನ್‌ಸ್ಪೆಕ್ಟರ್ ಶಂಕರ್‌ ನಾಯಕ್ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ರಾತ್ರಿ ಸಭೆ ನಡೆಸಿ, ಸಲಹೆ–ಸೂಚನೆಗಳನ್ನು ನೀಡಿದರು. ಕಗ್ಗಂಟಾಗಿರುವ ಪ್ರಕರಣದ ತನಿಖೆಗಾಗಿ ಎಸ್‌ಪಿ ಈಗಾಗಲೇ 3 ತಂಡಗಳನ್ನು ರಚಿಸಿದ್ದಾರೆ. ಬಿಡದಿ ಠಾಣೆಯಲ್ಲೇ ನಿತ್ಯ ಬೀಡು ಬಿಡುತ್ತಿರುವ ಎಸ್‌ಪಿ, ತನಿಖೆಯ ಮೇಲ್ವಿಚಾರಣೆ ನಡೆಸುತ್ತಾ ತಂಡಗಳಿಗೆ ನಿರ್ದೇಶನ ನೀಡುತ್ತಿದ್ದಾರೆ.

ಪ್ರತಿಭಟನೆ; ಪೊಲೀಸರೊಂದಿಗೆ ವಾಗ್ವಾದ

ಘಟನೆ ಖಂಡಿಸಿ ಬಿಡದಿಯ ಬಿಜಿಎಸ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ನಾಲ್ಕು ದಿನಗಳಾದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದಷ್ಟು ಬೇಗ ತಪ್ಪಿತಸ್ಥರನ್ನು ಬಂಧಿಸಬೇಕು. ಹಂತಕರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ನಂತರ ಡಿವೈಎಸ್ಪಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು. ಮತ್ತೊಂದೆಡೆ ಗ್ರಾಮಕ್ಕೆ ಭೇಟಿ ನೀಡಿದ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಕೆಲ ಸಂಘಟನೆಯವರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪ್ರಕರಣದ ತನಿಖೆ ವಿಳಂಬವನ್ನು ಪ್ರಶ್ನಿಸುವ ಜೊತೆಗೆ ವಿಡಿಯೊ ಮಾಡಲು ಮುಂದಾಗಿದ್ದಕ್ಕೆ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿ ತಡೆದರು. ‘ನಮ್ಮ ಕರ್ತವ್ಯ ನಿರ್ವಹಿಸಲು ಬಿಡಿ’ ಎಂದು ಮೊಬೈಲ್ ಕ್ಯಾಮೆರಾ ಸರಿಸಿದರು. ಆಗ ಸಂಘಟನೆಯವರು ಹಾಗೂ ಗ್ರಾಮಸ್ಥರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.