ADVERTISEMENT

ಬಿಡದಿ ರೈಲು ಹಳಿ ಪಕ್ಕ ಬಾಲಕಿ ಶವ ಪತ್ತೆ ಪ್ರಕರಣ: ಅತ್ಯಾಚಾರ ನಡೆದಿಲ್ಲ ಎಂದ SP

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:29 IST
Last Updated 17 ಮೇ 2025, 15:29 IST
<div class="paragraphs"><p>ಖುಷಿ</p></div>

ಖುಷಿ

   

ಬಿಡದಿ (ರಾಮನಗರ): ತಾಲ್ಲೂಕಿನ ಬಿಡದಿ ಹೋಬಳಿಯ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ವಾರದ ಹಿಂದೆ ಶವವಾಗಿ ಪತ್ತೆಯಾಗಿದ್ದ ಮಾತು ಬಾರದ ಮತ್ತು ಕಿವಿ ಕೇಳಿಸದ ಬಾಲಕಿ ಖುಷಿ (15) ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಯಿಂದ ದೃಢಪಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಎಸ್‌ಎಲ್‌ ವರದಿ ಶನಿವಾರ ಸಂಜೆ ಕೈ ಸೇರುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು, ಬಿಡದಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಸುದ್ದಿಗೋಷ್ಠಿ ನಡೆಸಿದರು.

ADVERTISEMENT

‘ಪುತ್ರಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಾಯಿ ಸೇರಿದಂತೆ ಕುಟುಂಬದವರು ಆರೋಪಿಸಿದ್ದರು. ಹಾಗಾಗಿ, ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಬಾಲಕಿ ದೇಹದ 32 ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ಇಂದು ಸಂಜೆ ಕೈ ಸೇರಿದ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ಗೊತ್ತಾಗಿದೆ’ ಎಂದರು.

‘ಬಾಲಕಿ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿರುವ ಗುರುತುಗಳಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿಸಿರುವಂತೆ ಮೈ ಮೇಲೆ ಸಿಗರೇಟಿನಿಂದ ಸುಟ್ಟ ಗಾಯದಂತಹ ಯಾವುದೇ ಗುರುತುಗಳಿಲ್ಲ. ಸದ್ಯದಲ್ಲೇ ಮರಣೋತ್ತರ ಪರೀಕ್ಷೆ ವರದಿಯೂ ಕೈ ಸೇರಲಿದ್ದು, ಆಗ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಾಲಕಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ’ ಎಂಬ ಮಾತುಗಳ ಕುರಿತ ಪ್ರಶ್ನೆಗೆ, ‘ಇದುವರೆಗಿನ ತನಿಖೆ ಹಾಗೂ ವಿವಿಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಬಾಲಕಿ ರೈಲಿಗೆ ಸಿಲುಕಿ ಮೃತಪಟ್ಟಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತೇ ಹೊರತು, ಯಾರನ್ನೂ ಬಂಧಿಸಿರಲಿಲ್ಲ’ ಎಂದು ಸ್ಪಷ್ಟಪಡಿಸಿದರು. 

8ನೇ ತರಗತಿ ಓದುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದ ಖುಷಿ, ಮೇ 11ರಂದು ರಾತ್ರಿ ನಾಪತ್ತೆಯಾಗಿದ್ದಳು. ಬೆಳಿಗ್ಗೆ 7.45ರ ಸುಮಾರಿಗೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ರೈಲು ಹಳಿ ಪಕ್ಕ ಆಕೆ ಶವ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶವದ ಚಿತ್ರವನ್ನು ಹಂಚಿಕೊಂಡಿದ್ದ ಹಲವರು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ‘ಖುಷಿ ಸಾವಿಗೆ ನ್ಯಾಯ ಸಿಗಬೇಕು’ ಎಂದು ಅಭಿಯಾನ ಆರಂಭಿಸಿದ್ದರು. ಬಿಡದಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.