ADVERTISEMENT

ಮರಳೇಗವಿ ಮಠದಲ್ಲಿ ಗೋ ಶಾಲೆ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2019, 13:30 IST
Last Updated 24 ಆಗಸ್ಟ್ 2019, 13:30 IST
ಕನಕಪುರ ತಾಲ್ಲೂಕಿನಲ್ಲಿ ಗೋ ಶಾಲೆ ತೆರೆದಿರುವ ಮರಳೇ ಗವಿಮಠದ ಆವರಣ
ಕನಕಪುರ ತಾಲ್ಲೂಕಿನಲ್ಲಿ ಗೋ ಶಾಲೆ ತೆರೆದಿರುವ ಮರಳೇ ಗವಿಮಠದ ಆವರಣ   

ಕನಕಪುರ: ‘ತಾಲ್ಲೂಕಿನಲ್ಲಿ ಬರಗಾಲ ಉಂಟಾಗಿದ್ದು, ಜಾನುವಾರುಗಳಿಗೆ ಮರಳೇಗವಿ ಮಠದ ಆವರಣದಲ್ಲಿ ಗೋ ಶಾಲೆ ತೆರೆಯಲಾಗಿದೆ’ ಎಂದು ತಹಶೀಲ್ದಾರ್‌ ಎಂ.ಆನಂದಯ್ಯ ತಿಳಿಸಿದರು.

‘ವಾಡಿಕೆಯಂತೆ ಮುಂಗಾರು ಮಳೆಯಾಗದೆ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಉಂಟಾಗಿರುವುದರಿಂದ,ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಗೋ ಶಾಲೆಯಲ್ಲಿ ಗೋವುಗಳ ನಿರ್ವಹಣೆಗೆ ಮರಳೇಗವಿ ಮಠದೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ರೈತರಿಗೆ ಜಾನುವಾರುಗಳ ನಿರ್ವಹಣೆ ಕಷ್ಟವಾಗಿದ್ದು ಗೋವುಗಳನ್ನು ಮರಳೇಗವಿ ಮಠದ ಆವರಣಕ್ಕೆ ಕರೆತಂದರೆ ಅಲ್ಲಿ ಒಣ ಮೇವು ಅಥವಾ ಹಸಿ ಮೇವನ್ನು ಕೊಡಲಾಗುವುದು’ ಎಂದರು.

‘ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆ 5ರಿಂದಲೇ ಗೋಶಾಲೆ ತೆರಯಲಾಗಿದೆ. ಅಲ್ಲಿಗೆ ಬರುವ ಗೋವುಗಳ ನೋಂದಣಿ ಮಾಡಿಕೊಂಡು, ಮೇವನ್ನು ಕೊಡಲಾಗುವುದು. ಜತೆಗೆ ಅಲ್ಲಿ ಜಾನುವಾರುಗಳಿಗೆ ಕಾಯಿಲೆ ಹರಡದಂತೆ ಪಶು ವೈದ್ಯರನ್ನು ನೇಮಕ ಮಾಡಿದ್ದು, ಅವರು ಗೋವುಗಳ ಆರೋಗ್ಯ ತಪಾಸಣೆ ನಡೆಸಿ ರೋಗ ಬರದಂತೆ ಮುಂಜಾಗ್ರತೆ ವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಗೋ ಶಾಲೆ ತೆರೆದಿರುವ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ಕಂದಾಯ ಅಧಿಕಾರಿಗಳ ಮುಖಾಂತರ ಗ್ರಾಮಗಳಲ್ಲಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ತಾಲ್ಲೂಕಿನ ಎಲ್ಲ ರೈತರು ಈ ಗೋ ಶಾಲೆಗೆ ತಮ್ಮ ಜಾನುವಾರುಗಳನ್ನು ತರಬಹುದು. ಇಲ್ಲಿ ಎಲ್ಲ ರೀತಿಯ ಅನುಕೂಲಗಳನ್ನು ಒದಗಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.