ADVERTISEMENT

ಕನಕಪುರ: ಸುವರ್ಣ ಸಂಭ್ರಮದ ಶಾಲೆಗಿಲ್ಲ ಉತ್ತಮ ಕಟ್ಟಡ

ಕೋನಮಾನಹಳ್ಳಿ ಶಾಲೆಯಲ್ಲಿ ಗುಣಮಟ್ಟದ ಬೊಧನೆ: ಬೀಳುವ ಸ್ಥಿತಿಯಲ್ಲಿ ಕಟ್ಟಡ

ಬರಡನಹಳ್ಳಿ ಕೃಷ್ಣಮೂರ್ತಿ
Published 11 ಜನವರಿ 2024, 6:16 IST
Last Updated 11 ಜನವರಿ 2024, 6:16 IST
ಕನಕಪುರ ತಾಲ್ಲೂಕಿನ ಕೋನಮಾನಹಳ್ಳಿ ಸರ್ಕಾರಿ ಶಾಲೆಯ ಚಾವಣಿ ಸ್ಥಿತಿ
ಕನಕಪುರ ತಾಲ್ಲೂಕಿನ ಕೋನಮಾನಹಳ್ಳಿ ಸರ್ಕಾರಿ ಶಾಲೆಯ ಚಾವಣಿ ಸ್ಥಿತಿ   

ಕನಕಪುರ: ತಾಲ್ಲೂಕಿನ ಕಸಬಾ ಹೋಬಳಿ ಕೋನಮಾನಹಳ್ಳಿಯಲ್ಲಿನ ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿರುವ ಸರ್ಕಾರಿ ಶಾಲೆಯ ಚಾವಣಿ ಪೂರ್ಣ ಹಾಳಾಗಿ ಕಟ್ಟಡದ ಜಂತಿಗಳು ಮುರಿದಿವೆ. ಕಟ್ಟಡವು ಬೀಳುವ ಸ್ಥಿತಿಯಲ್ಲಿದೆ. ಯಾವ ಕ್ಷಣದಲ್ಲಿ ಕಟ್ಟಡ ಕುಸಿಯಲಿದೆಯೊ ಎಂಬ ಆತಂಕದಲ್ಲಿಯೇ ಮಕ್ಕಳು ಕಲಿಕೆಯಲ್ಲಿ ತೊಡಗುವ ಅನಿವಾರ್ಯವಿದೆ.

ಐದು ದಶಕದ ಹಿಂದೆ ಕಟ್ಟಿಸಿದ್ದ ಎರಡು ಶಾಲಾ ಕೊಠಡಿಗಳಲ್ಲೇ ಇಂದಿಗೂ ಪಾಠ ನಡೆಯುತ್ತಿದೆ. ಒಂದರಿಂದ ಐದನೇ ತರಗತಿಯಲ್ಲಿ 21 ಮಕ್ಕಳಿದ್ದಾರೆ. ಯುಕೆಜಿಗೆ ಹೋಗುವ ಆರು ಮಕ್ಕಳು ಇದೇ ಶಾಲೆಯಲ್ಲಿ ಕಲಿಯುತ್ತಿದ್ದಾರೆ.

ಶಿಕ್ಷಕಿಯರ ಆಸ್ಥೆಯಿಂದಾಗಿ ಇಲ್ಲಿನ ಮಕ್ಕಳಿಗೆ ಸರ್ಕಾರಿ ಸಮವಸ್ತ್ರದ ಬದಲಾಗಿ ದಾನಿಗಳ ಮೂಲಕ ಖಾಸಗಿ ಶಾಲೆಗಳಿಗೆ ಸಮಾನವಾಗಿ ಮೂರು ಜೊತೆ ಸಮವಸ್ತ್ರ ಕೊಡಿಸಿದ್ದಾರೆ.

ADVERTISEMENT
ಶಾಲೆಯ ಗೋಡೆಯು ಬಿರುಕು ಬಿಟ್ಟಿರುವುದು

ಒಂದನೇ ತರಗತಿಯಿಂದ ಇಂಗ್ಲಿಷ್‌, ಹಿಂದಿ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಪಠ್ಯೇತರ ಚಟುವಟಿಕೆ, ಆಟ, ಚಿತ್ರಕಲೆ, ಸಾಹಿತ್ಯ, ಕಥೆ, ಕವನಗಳ ರಚನೆಯಂತಹ ಸೃಜನಶೀಲ ಕಲೆಗಳನ್ನು ಇಲ್ಲಿನ ಮಕ್ಕಳು ಅಭಿವ್ಯಕ್ತಗೊಳಿಸುತ್ತಿದ್ದಾರೆ.

ಇಲ್ಲಿನ ಕಲಿಕೆಯ ಗುಣಮಟ್ಟಕ್ಕೆ ಸಾಕ್ಷಿ ಎಂಬಂತೆ ಪೋಷಕರು ಖಾಸಗಿ ಶಾಲೆಗಳನ್ನು ಬಿಡಿಸಿ ಇದೇ ಶಾಲೆಗೆ ಮಕ್ಕಳನ್ನು ದಾಖಲಿಸಿದ್ದಾರೆ.
ಐದನೇ ತರಗತಿ ಮುಗಿಸಿ ನವೋದಯ ಶಾಲೆಗೆ ದಾಖಲಾಗುವ ಮಕ್ಕಳಿಗೆ ಅನುಕೂಲ ಆಗುವಂತೆ ಶಿಕ್ಷಕಿಯರು ನವೋದಯ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದ್ದಾರೆ.

ಚಾವಣಿಯ ಹಂಚು ಬೀಳುವ ಸ್ಥಿತಿಯಲ್ಲಿವೆ

‘ನಮ್ಮೂರಿನ ಶಾಲೆ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ. ಶಿಕ್ಷಕಿಯರು ತಮ್ಮ ಮಕ್ಕಳಿಗಿಂತ ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಎಲ್ಲವೂ ಖುಷಿಯಿದೆ. ಆದರೆ ಮಕ್ಕಳ ಕಲಿಕೆಗೆ ಪೂರಕವಾಗಿ ಒಳ್ಳೆಯ ಕಟ್ಟಡದ ಸಮಸ್ಯೆಯಿದೆ’ ಎನ್ನುತ್ತಾರೆ ಪೋಷಕರು.

ಶಾಲೆಯಲ್ಲಿ ಕಲಿಕೆಯಲ್ಲಿ ನಿರತ ವಿದ್ಯಾರ್ಥಿಗಳು
ಕೆ.ಎಸ್‌.ಲೋಹಿತ್‌
ಶಾಲೆಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೆ ಇಲ್ಲಿಯವರೆಗೂ ಅವರು ಕಾಳಜಿವಹಿಸಿಲ್ಲ. ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ ಮಕ್ಕಳು ಇದ್ದಾರೆ. ಆದರೆ ಒಳ್ಳೆಯ ಕಟ್ಟಡವಿಲ್ಲ
-ಶಿವರಾಜು ಎಸ್‌ಡಿಎಂಸಿ ಸದಸ್ಯ
ಶೀಘ್ರ ಕಟ್ಟಡ ನಿರ್ಮಾಣ
‘ನಾನು ಓದಿದ್ದು ಇದೇ ಸರ್ಕಾರಿ ಶಾಲೆಯಲ್ಲಿ. ಈ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಹೊಸ ಕಟ್ಟಡ ಗ್ರಾಮದಲ್ಲಿ ಪಡಿತರ ವಿತರಣೆ ಅಂಗನವಾಡಿ ಗ್ರಾಮಕ್ಕೆ ಸೇತುವೆ ಮಾಡಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು.‌ ಅದಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇನೆ. ಶಾಲಾ ಕಟ್ಟಡ ಬಿಟ್ಟು ಸೇತುವೆ ಅಂಗನವಾಡಿ ಪಡಿತರ ವಿತರಣೆ ಕೆಲಸಗಳು ಆಗಿವೆ. ಶೀಘ್ರ ಶಾಲಾ ಕಟ್ಟಡ ಮಾಡಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್‌.ಲೋಹಿತ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.