ADVERTISEMENT

ಉತ್ತಮ ಸಾಹಿತ್ಯಕ್ಕೆ ಪೂರಕ ವಾತಾವರಣ ಬೇಕು

ಮೂರು ದತ್ತಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 14:35 IST
Last Updated 25 ಜನವರಿ 2020, 14:35 IST
ಚನ್ನಪಟ್ಟಣ ತಾಲ್ಲೂಕಿನ ನಾಗವಾರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಎಚ್.ದೊಡ್ಡೇಗೌಡ ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ನಾಗವಾರದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಎಚ್.ದೊಡ್ಡೇಗೌಡ ಉದ್ಘಾಟಿಸಿದರು   

ಚನ್ನಪಟ್ಟಣ: ಭಾಷಾ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವಾದಾಗಲೆ ಉತ್ತಮ ಸಾಹಿತ್ಯ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲ ಎಚ್.ದೊಡ್ಡೇಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ನಾಗವಾರದ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಶನಿವಾರ ನಡೆದ ಶ್ರೀಮತಿ ದೇವೀರಮ್ಮ-ಶಿವಲಿಂಗೇಗೌಡ, ಲಕ್ಷ್ಮಮ್ಮ ಮತ್ತು ರಾಮೇಗೌಡ, ಹನುಮಾಪುರದೊಡ್ಡಿ ಮತ್ತು ಎ.ವಿ.ಹಳ್ಳಿ ಶ್ರೀ ವೆಂಕಟೇಗೌಡ ಮತ್ತು ನಿಂಗಮ್ಮ ಅವರುಗಳ ಮೂರು ದತ್ತಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳು ಈಗಿನಿಂದಲೇ ರೂಢಿಸಿಕೊಂಡರೆ ಮುಂದೆ ಒಳ್ಳೆಯ ಸಾಹಿತ್ಯ ರಚನೆ ಮಾಡಬಹುದು. ಇತಿಹಾಸದ ಅರಿವು ಯಾರಿಗಿಲ್ಲವೋ ಅವರಿಗೆ ಭಾಷೆಯ ಕಲ್ಪನೆ ಅಸಾಧ್ಯ ಎಂದು ತಿಳಿಸಿದರು.

ADVERTISEMENT

ಅಧ್ಯಾಪಕ ಸಿ.ಚನ್ನವೀರೇಗೌಡ ಕನ್ನಡ ನಾಡು ನುಡಿಯ ಅರಿವು-ಜ್ಞಾನ ಮತ್ತು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆ ಕುರಿತು ಉಪನ್ಯಾಸ ನೀಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಿರತ ಪ್ರಯತ್ನದಿಂದ ಕನ್ನಡ ಸಾಹಿತ್ಯ ಪರಿಷತ್ ಉದಯವಾಗಿ ಉದಯೋನ್ಮುಖ ಸಾಹಿತಿಗಳಿಗೆ ಸ್ಫೂರ್ತಿಯಾಯಿತು ಎಂದರು.

ನಿವೃತ್ತ ತೋಟಗಾರಿಕಾ ಅಭಿವೃದ್ಧಿ ಅಧಿಕಾರಿ ಎಚ್.ಆರ್.ರಾಮಚಂದ್ರಯ್ಯ ಮಾತನಾಡಿ, ಭೌಗೋಳಿಕ ವಿಸ್ತೀರ್ಣ ಅಷ್ಟೇ ಇದ್ದು ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿಭೂಮಿ ಇಳಿಮುಖ ಮಾಡಿಕೊಂಡು ನಗರೀಕರಣಕ್ಕೆ ಹಾತೊರೆಯುತ್ತಿದ್ದೇವೆ. ಇದ್ದ ಕೆರೆ, ಕುಂಟೆಗಳನ್ನು ಮುಚ್ಚಿ ಕಾಂಕ್ರೀಟ್ ನಾಡು ನಿರ್ಮಿಸಲು ಹೊರಟಿದ್ದೇವೆ. ಇದರಿಂದ ನೀರಿನ ಸಮಸ್ಯೆ ತಲೆದೋರಿ ಹಾಹಾಕಾರ ಉಂಟಾಗಿದೆ. ಕೃಷಿಯನ್ನು ಕಡಿಮೆ ಮಾಡಿ ವ್ಯಾಪಾರೀಕರಣಕ್ಕೆ ಜಾರುತ್ತಿದ್ದೇವೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಮತ್ತೀಕೆರೆ ಬಿ.ಚಲುವರಾಜು ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಚ.ಶಿ.ವೆಂಕಟೇಗೌಡ, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಶಿವಮಾದು, ನಿವೃತ್ತ ಶಿಕ್ಷಕ ಸಿದ್ದಪ್ಪ, ನಿವೃತ್ತ ಉಪನ್ಯಾಸಕ ರಾಮಸ್ವಾಮಿ, ವೆಂಕಟೇಗೌಡ, ಸಾಹಿತಿ ದೇ.ನಾರಾಯಣಸ್ವಾಮಿ, ಕಸಾಪ ಕಾರ್ಯದರ್ಶಿ ಮಂಜೇಶ್ ಬಾಬು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ ಇದ್ದರು.

ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆ.ಎಚ್.ಕುಮಾರ್ ಗೀತಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.