ADVERTISEMENT

ಶೀಘ್ರ 'ಗುಡ್‌ಲೈಫ್‌ ಫ್ಲೆಕ್ಸಿ' ಹಾಲು ಪ್ಯಾಕೆಟ್‌ ಬಿಡುಗಡೆ: ಡಿ.ಕೆ ಸುರೇಶ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 2:15 IST
Last Updated 13 ಆಗಸ್ಟ್ 2025, 2:15 IST
ಕನಕಪುರ ಶಿವನಹಳ್ಳಿ ಮೆಗಾ ಡೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಿ.ಕೆ.ಸುರೇಶ್, ತಾಲ್ಲೂಕಿನ ಎಂಪಿಸಿ ಅಧ್ಯಕ್ಷ, ನಿರ್ದೇಶಕ, ಕಾರ್ಯದರ್ಶಿಗಳನ್ನು ಸತ್ಕರಿಸಲಾಯಿತು
ಕನಕಪುರ ಶಿವನಹಳ್ಳಿ ಮೆಗಾ ಡೇರಿಯಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಡಿ.ಕೆ.ಸುರೇಶ್, ತಾಲ್ಲೂಕಿನ ಎಂಪಿಸಿ ಅಧ್ಯಕ್ಷ, ನಿರ್ದೇಶಕ, ಕಾರ್ಯದರ್ಶಿಗಳನ್ನು ಸತ್ಕರಿಸಲಾಯಿತು   

ಕನಕಪುರ: ‘ಬಮೂಲ್ ಆಗಲಿ, ನಂದಿನಿಯಾಗಲಿ ಇದು ನಮ್ಮ ಸಂಸ್ಥೆಯಲ್ಲ. ಇದು ರೈತರ ಸಂಸ್ಥೆ’ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ ಸುರೇಶ್ ತಿಳಿಸಿದರು.

ಬಮೂಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕನಕಪುರ ಹಾಲು ಒಕ್ಕೂಟದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೆ ಸಹಕರಿಸಿದ ಕನಕಪುರ ಶಿಬಿರ ಕಚೇರಿ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ, ಸಂಘದ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ವರ್ಗದವರಿಗೆ ತಾಲ್ಲೂಕಿನ ಶಿವನಹಳ್ಳಿ ಮೆಗಾ ಡೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಮತ್ತು ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ 60 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದವು. ಡಿ.ಕೆ.ಶಿವಕುಮಾರ್‌ ಅವರು ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚಿಸಿ, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಯಿತು ಎಂದರು.

ADVERTISEMENT

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸುಮಾರು 2.60 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಇಡೀ ಜಿಲ್ಲೆಯ ಜನರು ಒಕ್ಕೂಟದ ರೈತ ಬಾಂಧವರು ಸಹಕಾರ ಕ್ಷೇತ್ರದಲ್ಲಿ ಏನಾದರೂ ಬದಲಾವಣೆಯಾಗುತ್ತದೆ ಎಂದು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ಜನರು ಇಟ್ಟಿರುವ ನಂಬಿಕೆ ಸಾಕಾರಗೊಳಿಸಲು ಡಿ.ಕೆ.ಸುರೇಶ್ ಒಬ್ಬರಿಂದ ಸಾಧ್ಯವಿಲ್ಲ. ಬಮೂಲ್‌ ಒಕ್ಕೂಟದ ಆಡಳಿತ ಮಂಡಳಿ 14 ಮಂದಿ ನಿರ್ದೇಶಕರಿಂದಲೂ ಸಾಧ್ಯವಾಗುವುದಿಲ್ಲ. ಬೆಳಗ್ಗೆ ಎದ್ದು ಹಸುವಿಗೆ ಮೇವು ಹಾಕಿ, ಹಾಲು ಕರೆದು ಡೇರಿಗೆ ಹಾಲು ಹಾಕುವ ರೈತರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇಡೀ ರಾಜ್ಯದಲ್ಲಿ 12 ಲಕ್ಷ ಲೀಟರ್ ಹಾಲಿನ ಉತ್ಪನ್ನ ತಯಾರಿಸುವ ಏಕೈಕ ಯೂನಿಟ್‌ ಎಂದರೆ ಅದು ಬಮೂಲ್‌ ಒಕ್ಕೂಟ ವ್ಯಾಪ್ತಿಯ ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿರುವುದು ನಮ್ಮ ಹೆಮ್ಮೆ. ಬಮೂಲ್‌ ಒಕ್ಕೂಟದಿಂದ ಸದ್ಯದಲ್ಲಿ ಮೂರು ತಿಂಗಳವರೆಗೆ ಬಳಸಬಹುದಾದ ‘ಗುಡ್‌ಲೈಫ್‌ ಫ್ಲೆಕ್ಸಿ’ ಹಾಲಿನ ಪ್ಯಾಕೆಟ್‌ ಬಿಡುಗಡೆ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಬಮೂಲ್‌ನ ಎಲ್ಲ ನಿರ್ದೇಶಕರು, ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.